ಬೆಂಗಳೂರು: ರಾಜ್ಯದ ಆಡಳಿತವರ್ಗದಲ್ಲಿ ಇದೀಗ ಅಧಿಕಾರಿಗಳ ನಡುವೆ ವಾರ್ ಶುರುವಾದಂತಿದೆ. ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಪಾಲಿಕೆ ಆಯುಕ್ತೆಯ ರಾಜೀನಾಮೆ ಯತ್ನದವರೆಗೂ ತಲುಪಿರುವುದು ದುರದೃಷ್ಟಕರ.
ತಾವು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳದಿಂದ ಬೇಸತ್ತು ಸಿಎಸ್‌ಗೆ ರಾಜೀನಾಮೆ ಪತ್ರ ರವಾನಿಸಿರುವುದಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹೇಳಿದ್ದು ಈ ಬೆಳವಣಿಗೆಯಿಂದಾಗಿ ರಾಜ್ಯ ಸರ್ಕಾರ ಮುಜುಗರದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಅಧಿಕಾರಿಗಳ ಜೊತೆ ಸಂಧಾನ ನಡೆಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಶಿಲ್ಪಾ ನಾಗ್ ಅವರ ಮನವೊಲಿಸಿದ್ದಾರೆ.