ವಿಜಯನಗರ 4ನೇ ಹಂತಕ್ಕೆ ಕುಡಿಯುವ ನೀರು ಲೋಕಾರ್ಪಣೆ ಮಾಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
ಮೈಸೂರು: ವಿಜಯನಗರ 4ನೇ ಹಂತದ ಬಡಾವಣೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.
ಮುಡಾ ವತಿಯಿಂದ ಹಲವಾರು ವರ್ಷಗಳಿಂದ ಬಡಾವಣೆಗಳು ನಿರ್ಮಾಣ ಆಗಿವೆ. ಆದರೆ ಇನ್ನೂ ಹಲವಾರು ಬಡಾವಣೆಗೆ ಮೂಲಸೌಕರ್ಯಗಳು ಸಿಕ್ಕಿಲ್ಲ. ಇವುಗಳ ಅಭಿವೃದ್ಧಿಗೆ ಇದ್ದ ಎಲ್ಲಾ ಅಡಚಣೆಗಳನ್ನು ಈಗ ನಿವಾರಣೆ ಮಾಡಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬೆಂಗಳೂರುಗಿಂತ ಮೈಸೂರಿನ ಹೊಸ ಬಡಾವಣೆಗಳು ಅಭಿವೃದ್ಧಿಯಾಗಿವೆ ಎಂಬ ಭಾವನೆ ಇತ್ತು. ಆದರೆ ಖುದ್ದು ಭೇಟಿ ಮಾಡಿದಾಗ ಇಲ್ಲಿ ಸಾಕಷ್ಟು ಕೆಲಸಗಳು ಆಗಬೇಕು ಎಂದು ತಿಳಿಯಿತು. ಕೂಡಲೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಗಮನಕ್ಕೆ ತಂದಾಗ, ಅವರು ಎಲ್ಲಾ ಅಡಚಣೆಗಳ ನಿವಾರಣೆಗೆ ಶೇ.100 ರಷ್ಟು ಶ್ರಮ ಹಾಕಿದ್ದಾರೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಬೀದಿ ದೀಪ ಹಾಗೂ ಪಾರ್ಕ್‌ಗಳ ಅಭಿವೃದ್ಧಿಗೆ 377ಕೋಟಿ ರೂ.ಗಳ ಅನುದಾನಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಹೆಚ್.ವಿ.ರಾಜೀವ್ ಅವರು ಮುಡಾ ಅಧ್ಯಕ್ಷರಾದ ನಂತರ ಅಭಿವೃದ್ಧಿ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿವೆ ಎಂದು ಉಸ್ತುವಾರಿ ಸಚಿವರು ಹೇಳಿದರು.
ಮೈಸೂರಿನಲ್ಲಿ ಹೊಸ ಬಡಾವಣೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 98 ಕೋಟಿ ರೂ. ವೆಚ್ಚ ಮಾಡಲು ಇಂದು ಸಭೆ ನಡೆಸಿ, ತೀರ್ಮಾನ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿದ್ದೇನೆ. ನಾಗರಿಕರು ಕುಡಿಯುವ ನೀರಿಗಾಗಿ ಬವಣೆ ಅನುಭವಿಸಬಾರದು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬೆನ್ನುಹತ್ತಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಹಳೆ ಉಂಡುವಾಡಿ ಬಳಿ ಕೆ.ಆರ್.ಎಸ್.ಹಿನ್ನೀರಿನಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಅಂದಾಜು 350 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಏಷ್ಯಾದಲ್ಲೇ ಅತಿ ದೊಡ್ಡ ಬಡಾವಣೆ ಎಂಬ ಹೆಗ್ಗಳಿಗೆ ವಿಜಯನಗರ ಬಡಾವಣೆಗೆ ಇದೆ. ಇಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಾಗಬೇಕು, ಸರ್ಕಾರ ಈ ಬಗ್ಗೆ ಗಮನ ಕೊಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಪಾಲಿಕೆ ಮೇಯರ್ ಅನ್ವರ್ ಬೇಗ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಮುಡಾ ಅಧೀಕ್ಷಕ ಇಂಜಿನಿಯರ್ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.