ಬೆಂಗಳೂರು: ರಾಜ್ಸ ಸರ್ಕಾರ ಮುಸ್ಲಿಂ ಮೀಸಲಾತಿ ಕಡಿತ ಮಾಡಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಬಾಯಕರಾದ ಪಿ.ಆರ್. ರಮೇಶ್, ರಾಮಚಂದ್ರಪ್ಪ ಅವರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರೂ ಆದ ರಮೇಶ್ ಬಾಬು, ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಮುಸಲ್ಮಾನ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲಾಗಿತ್ತು. ಈ ರಾಜ್ಯ ಸರ್ಕಾರ ಅದನ್ನು ಕಸಿದುಕೊಂಡಿದ್ದು, ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಅಮಿತ್ ಶಾ ಅವರು ಮುಸಲ್ಮಾನರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಪ್ರಶ್ನೆಗಳನ್ನು ನೀಡಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರದ ಪರವಾಗಿ ವಾದ ಮಾಡಿದ ಸಾಲಿಸಿಟರ್ ಜೆನರಲ್ ಅವರು ಈ ಹೊಸ ಮೀಸಲಾತಿ ಆದೇಶವನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ. 2002ರಲ್ಲಿ ಇದ್ದ ಮುಸಲ್ಮಾನರ ಸಮೇತ ಇದ್ದ ಮೀಸಲಾತಿಯನ್ನು ಮುಂದುವರಿಸುವುದಾಗಿ ಹೇಳಿದ್ದು, ಈ ಹೇಳಿಕೆ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದ್ದಾರೆ. ಅರ್ಜಿದಾದರ ಪರ ವಕೀಲರು ಹೆಚ್ಚಿನ ಸಮಯಾವಕಾಶ ನೀಡುವುದು ಬೇಡ ಎಂದು ಹೇಳಿದ್ದಾರೆ. ರಾಜಕೀಯಕ್ಕಾಗಿ, ಚುನಾವಣಾ ಗಿಮಿಕ್ ಗಾಗಿ ಸರ್ಕಾರ ಈ ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಿದೆ. ಇದೆಲ್ಲವೂ ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದೆ. ಅವರ ಈ ತಪ್ಪಿನ ಪರಿಣಾಮವಾಗಿ ಸರ್ಕಾರ ನಾವು ಹೊಸ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ಸಾಲಿಸಿಟರ್ ಜೆನರಲ್ ಮೂಲಕ ಹೇಳಿಸಿದ್ದಾರೆ. ಅಷ್ಟರ ಮಟ್ಟಿಗೆ ಬಿಜೆಪಿ, ಅಮಿತ್ ಶಾ, ಬೊಮ್ಮಾಯಿ ಅವರು ರಾಜ್ಯದ ಜನರಲ್ಲಿ ಕ್ಷಮೆ ಕೋರಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.
ಜೋಷಿ ಹೇಳಿಕೆಗೆ ಖಂಡನೆ..
ಪ್ರಹ್ಲಾದ್ ಜೋಷಿ ಅವರು ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಅವರ ನಿರ್ಧರವಿದೆ. ನನ್ನ ಯಾವುದೇ ಹಸ್ತಕ್ಷೇಪವಿಲ್ಲ ಎಂದಿದ್ದಾರೆ. ಅವರು ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಗೆದ್ದು ಲೋಕಸಭಾ ಸದಸ್ಯರಾಗಿದ್ದರೆ ಅವರಿಗೆ ಬೆಂಬಲ ನೀಡಿದ್ದವರು ಜಗದೀಶ್ ಶೆಟ್ಟರ್ ಅವರು. ಆದರೆ ಜೋಷಿ ಅವರು ಶೆಟ್ಟರ್ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ. 2024ರ ಚುನಾವಣೆಯಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಶೆಟ್ಟರ್ ಅವರ ಬೆಂಬಲಿಗರು ತಿರುಗಿ ಬೀಳುವ ಭಯದಿಂದ ನನಗೂ ಈ ವಿಚಾರಕ್ಕೂ ಸಂಬಂಧವಿಲ್ಲ ಎಂದು ಮೋದಿ ಹಾಗೂ ಶಾ ಅವರ ತಲೆಗೆ ಕಟ್ಟುತ್ತಿದ್ದಾರೆ ಎಂದವರು ವಿಶ್ಲೇಷಿಸಿದರು.
ಜೋಷಿ ಅವರು ಶೆಟ್ಟರ್ ಅವರ ಮನವೊಲಿಸಲು ಅವರ ಮನೆಗೆ ಹೋದಾಗ, ಬಿಜೆಪಿ ಬಿಟ್ಟರೆ ಇಡಿ, ಐಟಿ, ಸಿಬಿಐ ತನಿಖೆ ಎದುರಿಸುವ ಬೆದರಿಕೆ ಹಾಕಿದ್ದರು. ಶೆಟ್ಟರ್ ಅವರು ಇದಕ್ಕೆ ಹೆದರದೇ, ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ರಾಜ್ಯದ ಜನ ಶೆಟ್ಟರ್ ಹಾಗೂ ಸವದಿ ಅವರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ನೋಡಿದ್ದಾರೆ. ಯಡಿಯೂರಪ್ಪ ಅವರು ಕಣ್ಣಲ್ಲಿ ನೀರು ಹಾಕಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು, ನಂತರ ಏನೆಲ್ಲಾ ಆಗಿದೆ ಎಂದು ಜನ ನೋಡಿದ್ದಾರೆ. ಹೀಗಾಗಿ ಜೋಷಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಲು ಮೂಲ ಕಾರಣ ಜೋಷಿ ಅವರು. ಹೀಗಾಗಿ ಜೋಷಿ ಅವರು ಕೂಡಲೇ ಶೆಟ್ಟರ್ ಅವರಿಗೆ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಹೇಳಿದರು.