ಬಾಗಲಕೋಟೆ: ಪ್ರತಿಯೊಬ್ಬರಿಗೂ ‘ಕಡಿಮೆ ದರದಲ್ಲಿ’ ಕೈಗೆಟುಕುವ ರೀತಿ ಮರಳು ಸಿಗುವಂತಹ ಹಾಗೂ ದೇಶಕ್ಕೆ ಮಾದರಿಯಾದ ಮರಳು ನೀತಿಯನ್ನು ಶೀಘ್ರದಲ್ಲೇ ಜಾರಿ ಮಾಡಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಅವರು ತಿಳಿಸಿದ್ದಾರೆ.
ಮಂಗಳವಾರ ಮರಳು ಹಾಗೂ ಜೆಲ್ಲಿ ಕ್ರಷರ್ ಮಾಲೀಕರಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಚಿವ ನಿರಾಣಿ, 2021-26ಕ್ಕೆ ಅನ್ವಯವಾಗುವಂತೆ ನೀತಿಯನ್ನು ತರಲಿದ್ದೇವೆ ಎಂದು ತಿಳಿಸಿದರು.
ಬೇರೆ ಬೇರೆ ರಾಜ್ಯಗಳು ಮರಳು ನೀತಿಯಲ್ಲಿ
‘ಕರ್ನಾಟಕದ ಮಾದರಿ’ಯನ್ನು ಅನುಸರಿಸಬೇಕು.
ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮಖರಾಗಿದ್ದಾರೆ ಎಂದರು.
ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸರಳವಾಗಿ ಮರಳು ಸಿಗುವಂತೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ‘ಮರಳು ನೀತಿ’ಯನ್ನು ಜಾರಿ ಮಾಡಲಾಗುವುದು ಎಂದರು.
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ , ಮಧ್ಯ ಕರ್ನಾಟಕ ಸೇರಿದಂತೆ ಒಂದೊಂದು ಭಾಗಕ್ಕೆ ಪ್ರತ್ಯೇಕವಾದ ಮರಳು ನೀತಿ ಇದೆ. ಈಗಾಗಲೇ ಒಂದು ಕರಡನ್ನು ತಂದಿದ್ದೇವೆ ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ ಎಂದು ವಿವರಿಸಿದರು.
ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಉದ್ದೇಶದಿಂದ ಎತ್ತಿನಗಾಡಿ,ಟ್ರ್ಯಾಕ್ಟರ್ ಗಳಲ್ಲಿ ತರಲು ಅವಕಾಶ ನೀಡಲಾಗುವುದೆಂದು ವಿವರಿಸಿದರು.
ಮರಳು ಗಣಿಗಾರಿಕೆಗೆ ಬ್ಲಾಕ್ ಗಳನ್ನು ಗುರುತಿಸಿ ಹರಾಜಿನ ಮೂಲಕ ಗುತ್ತಿಗೆ ನೀಡಿರುವ ಪ್ರದೇಶ ಹೊರತುಪಡಿಸಿ ಹಳ್ಳ, ತೊರೆಗಳಲ್ಲಿ ಸ್ವಂತ ಬಳಕೆಗೆ ದ್ವಿಚಕ್ರ ವಾಹನ, ಕತ್ತೆ, ಬಂಡಿ ಟ್ರ್ಯಾಕ್ಟರ್ ಗಳಲ್ಲಿ ಕೊಂಡೊಯ್ಯುವ ಬಡವರು, ರೈತರಿಗೆ ಪರವಾನಗಿ, ರಾಯಲ್ಟಿಯಿಂದ ವಿನಾಯಿತಿ ನೀಡಲಾಗುವುದು.
ಆದರೆ, ಇದನ್ನೇ ಸಂಗ್ರಹಿಸಿ ಲಾರಿ, ಟಿಪ್ಪರ್ ಗಳಲ್ಲಿ ಬೇರೆಡೆ ಸಾಗಣೆ, ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.
ಎಲ್ಲರಿಗೂ ಮರಳುಸಿಗಬೇಕು. ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಸರಕಾರದ ಬೊಕ್ಕಸಕ್ಕೆ ಆದಾಯ ಬರಬೇಕು. ಸಾರ್ವಜನಿಕರಿಗೂ ತೊಂದರೆಯಾಗಬಾರದು. ಇದು ನಮ್ಮ ಇಲಾಖೆಯ ಮೂಲ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು.
ಸ್ಥಗಿತಗೊಂಡಿರುವ ಗಣಿಗಳನ್ನು ಪುನರರಾಂಭ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾವಾರು ಮಾಹಿತಿ ನೀಡುವಂತೆ ಭೂ ವಿಜ್ಙಾನ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಅರ್ಜಿಗಳನ್ನು ತ್ವರಿತವಾಗಿ ಇತ್ಯಾರ್ಥಮಾಡಲು ಇದೇ ಮೊದಲ ಬಾರಿಗೆ ಇಲಾಖೆಯಲ್ಲಿ ಏಕಗಾವಾಕ್ಷಿ ಪದ್ದತಿಯನ್ನು ಜಾರಿ ಮಾಡುತ್ತಿದ್ದೇವೆ. ಅರಣ್ಯ, ಕಂದಾಯ ಮತ್ತಿತರ ಇಲಾಖೆಗಳನ್ನು
ಒಟ್ಟಿಗೆ ಸೇರಿಸಿ ಗಣಿ ಸಮಸ್ಯೆಗೆ ಸಂಬಂದಿಸಿದಂತೆ ಪರಿಹರಿಸುತ್ತೇವೆ ಎಂದುಸಚಿವರು ತಿಳಿಸಿದರು.
ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳಿವೆ.
ಎಲ್ಲವನ್ನೂ ಪರಿಶೀಲನೆ ಮಾಡಿ ತ್ವರಿತವಾಗಿ
ಮಾಡಲು ಗಣಿ ಅದಾಲತ್ ಜಾರಿಗೆ ತರುತ್ತೇವೆ. ಈ ಅದಾಲತ್ ಮೂಲಕ ನೆನೆಗುದಿಗೆ ಬಿದ್ದಿರುವ ಅರ್ಜಿಗಳನ್ನು ಇತ್ಯಾರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.