ಚಿಕ್ಕಮಗಳೂರು: ಒತ್ತುವರಿ ಕಿರುಕುಳ, ವಿದ್ಯುತ್ ಬವಣೆ ಸೇರಿದಂತೆ ಕಾಫಿ ಬೆಳೆಗಾರರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಯ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಹಳಸೆ ರಸ್ತೆಯಲ್ಲಿರುವ ದಿ ಕಾಫಿ ಕೋರ್ಟ್ ಅತಿಥಿ ಗೃಹವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು; ಪ್ರಕೃತಿ ನೆರವಿದ್ದರೂ ಕಾಫಿ ಬೆಳೆಗಾರರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಮಲೆನಾಡಿನಲ್ಲಿ ಕಾಫಿ ಬೆಳೆಯುವ ಬಹುತೇಕ ಬೆಳೆಗಾರರು ಒತ್ತುವರಿ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಒತ್ತುವರಿ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ. ಇದಕ್ಕೆ ಮುಕ್ತಿ ಕಾಣಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಈ ಭಾಗಕ್ಕೆ ದಿನ ನಿತ್ಯವೂ 24×7 ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರೇ ಆದೇಶ ನೀಡಿದ್ದರು. ಇಲ್ಲಿ ನೋಡಿದರೆ ಆದೇಶ ಜಾರಿಗೆ ಬಂದಿಲ್ಲ. ಎಲ್ಲಿ ತಪ್ಪಾಗಿದೆ, ಅಧಿಕಾರಿಗಳು ಎಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.
ಮಲೆನಾಡು ಪ್ರದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಹೆಚ್ಚಬೇಕು. ಅದಕ್ಕೆ ವಿದ್ಯುತ್ ಜತೆ ಅಂತರ್ಜಾಲ ಸಂಪರ್ಕವೂ ಮುಖ್ಯ. ಅಂದರೆ; ಹೈಸ್ಪೀಡ್ ಇಂಟರ್‌ನೆಟ್ ಅಗತ್ಯವಾಗಿರುತ್ತದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರು ಶಂಕುಸ್ಥಾಪನೆ ಮಾಡಿದ್ದ ಕಾಫಿ ಕೋರ್ಟ್ ಕಟ್ಟಡವನ್ನು ಉದ್ಘಾಟನೆ ಮಾಡುವ ಭಾಗ್ಯ ನನ್ನದಾಗಿದೆ ಎಂದ ಉಪ ಮುಖ್ಯಮಂತ್ರಿ; ಮುಂದಿನ ದಿನಗಳಲ್ಲಿ ಮಲೆನಾಡು ಪ್ರದೇಶದ ಅಭಿವೃದ್ಧಿಯ ವೇಗ ಹೇಗಿರುತ್ತದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನ ಪರಿಷತ್ತಿನ ಉಪ ಸಭಾಪತಿ ಪ್ರಾಣೇಶ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ಕಾಫಿ ಕೋರ್ಟಿನ ಸಂಸ್ಥಾಪಕ ಅಧ್ಯಕ್ಷ ಜಯಪ್ರಕಾಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು