ಮುಂಬೈ: ಮಹಾರಾಷ್ಟ್ರದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೊರೋನಾ ಸೋಂಕಿಗೆ ಅಂಕುಶ ಹಾಕುವ ಸಲುವಾಗಿ ಠಾಕ್ರೆ ಸರ್ಕಾರ ಕಠಿಣ ನಿಯಮಾವಳಿ ಜಾರಿಗೆ ತಂದಿದೆ. ನಾಳೆಯಿಂದ 15 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಿಸಲಾಗಿದೆ.
ಸಂಪೂರ್ಣ ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇತ್ತಾದರೂ, ಸೆಮಿ ಲಾಕ್ಡೌನ್ ಮಾದರಿಯಲ್ಲಿ ಮಹಾರಾಷ್ಟ್ರದಾದ್ಯಂತ ಜನತಾ ಕರ್ಫ್ಯೂ ಘೋಷಿಸಲಾಗಿದೆ.
ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ಡೌನ್ ಇರುವುದಿಲ್ಲ. ಆದರೆ 15 ದಿನಗಳ ಕಾಲ ಜನತಾ ಕರ್ಫ್ಯೂ ಇರಲಿದೆ ಎಂದು ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜನತಾ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬರದೆ ಜತನಾ ಕರ್ಫ್ಯೂವನ್ನು ಪಾಲಿಸಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಪಾರ್ಸೆಲ್, ಹೋಂ ಡಿಲಿವರಿ ಸೇವೆಗಳು ಲಭ್ಯವಿರಲಿದೆ. ಮಾಲ್ಗಳು, ಶಾಪ್ಗಳು, ಸಿನಿಮಾ ಮಂದಿರಗಳು, ಆಡಿಟೋರಿಯಂಗಳು, ಜಿಮ್, ಈಜುಕೊಳಗಳು, ಕ್ರೀಡಾಂಗಣಗಳು, ಪಾರ್ಕ್’ಗಳನ್ನು ಬಂದ್ ಮಾಡಲಾಗುತ್ತದೆ. ಸಾರ್ವಜನಿಕ ಸಭೆ, ಸಮಾರಂಭಗಳು, ಧಾರ್ಮಿಕ ಉತ್ಸವಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೂ ಅವಕಾಶವಿಲ್ಲ. ಪ್ರತೀ ರಾತ್ರಿ 8 ಗಂಟೆಯಿಂದ ಮೇ 1ರವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ.