ಬೆಂಗೂರು: ಕೆಲವು ಸಚಿವರದ್ದಷ್ಟೇ ರಾಜೀನಾಮೆ ಪಡೆದು ಕೇಂದ್ರ ಸಂಪುಟ ವಿಸ್ತರಣೆ ಮಾಡಲಾಗಿದೆ. ಆದರೆ ಪರಿಸ್ಥಿತಿ ಗಮನಿಸಿದರೆ ಪ್ರಧಾನಿ ಮೋದಿಯವರೇ ರಾಜೀನಾಮೆ ನೀಡಬೇಕಿತ್ತು ಎಂದು ಕಾಂಗ್ರೆಸ್ ಹೇಳಿದೆ. ವೈಫಲ್ಯಗಳನ್ನು ಗಮನಿಸಿದರೆ ಪ್ರಧಾನಿಯವರೇ ಎಲ್ಲದಕ್ಕೂ ಹೊಣೆಯಾಗಿದ್ದು ಅವರೇ ರಾಜೀನಾಮೆ ನೀಡಬೇಕಿದೆ ಎಂದು ಪ್ರದೇಶ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿರವರ ಮಂತ್ರಿ ಮಂಡಲದ ಪುನರ್‍ರಚನೆಯು ಜನರ ಗಮನ ಬೇರೆಡೆ ಸೆಳೆಯುವ ಕೆಲಸವಾಗಿದೆ ಎಂದರು. ಈ ಸಂಬಂಧ ಕಾಂಗ್ರೆಸ್ ಪಕ್ಷದ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಚಿದಂಬರಂ ಹಾಗೂ ಇತರ ಪ್ರಮುಖರು ಹೇಳಿಕೆಗಳನ್ನು ನೀಡಿದ್ದು, ಕೇಂದ್ರ ಸರ್ಕಾರದ ವೈಫಲ್ಯಕ್ಕಾಗಿ ಪ್ರಧಾನ ಮಂತ್ರಿಗಳೇ ರಾಜೀನಾಮೆ ನೀಡಬೇಕಿತ್ತೆಂದು ತಿಳಿಸಿರುತ್ತಾರೆ ಎಂದರು.
ಕರ್ನಾಟಕ ಬಿಜೆಪಿಯ ಕೆಲವು ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಂತ್ರಿಮಂಡಲದ ಪುನರ್‍ರಚನೆಯಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿದ್ದು, ಕರ್ನಾಟಕಕ್ಕೆ ಹೆಚ್ಚು ಸ್ಥಾನ ದೊರೆತಿರುವುದಾಗಿ ಆತ್ಮ ಪ್ರಶಂಸೆ ಮಾಡಿಕೊಂಡು, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಟೀಕಿಸುವ ವ್ಯರ್ಥ ಪ್ರಯತ್ನ ಮಾಡಿರುತ್ತಾರೆ. ಅಂತು ಇಂತೂ ಕಾಂಗ್ರೆಸ್ ಸಿದ್ಧಾಂತವಾದ ಸಾಮಾಜಿಕ ನ್ಯಾಯದ ಭಜನೆಗೆ ನಿಂತಿರುವ ಬಿಜೆಪಿಗೆ ಧನ್ಯವಾದಗಳನ್ನು ಹೇಳಬೇಕಾಗುತ್ತದೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
ದುರ್ಬಲ ವರ್ಗದ ಕಡೆಗಣನೆ..?
ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಕೇಂದ್ರದ ಬಿಜೆಪಿ ಸರ್ಕಾರ ಮೋದಿಯವರನ್ನೂ ಸೇರಿ 78 ಸದಸ್ಯರ ಸಚಿವ ಸಂಪುಟ ಪುನರ್‍ರಚನೆ ಮಾಡಿದೆ. ಇದರಲ್ಲಿ ಮೋದಿಯವರನ್ನೂ ಒಳಗೊಂಡು 31 ಸಂಪುಟ ದರ್ಜೆಯ ಸಚಿವರಿರುತ್ತಾರೆ. 2 ಸ್ವತಂತ್ರ ರಾಜ್ಯ ಸಚಿವರಿದ್ದು, 45 ರಾಜ್ಯ ಸಚಿವರಿರುತ್ತಾರೆ. ಸಂಪುಟ ದರ್ಜೆಯ ಸಚಿವರಲ್ಲಿ ಬಹುತೇಕ ಮುಂದುವರಿದ ಹಾಗೂ ಪ್ರಬಲ ಸಮುದಾಯಗಳಿಗೆ ಅವಕಾಶ ನೀಡಿದ್ದು, ಹಿಂದುಳಿದ, ದಲಿತ ಹಾಗೂ ಅಲ್ಪ ಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ರಾಜ್ಯ ಸಚಿವ ಸ್ಥಾನಗಳಿಗೆ ಸೀಮಿತಗೊಳಿಸಿರುತ್ತಾರೆ. ಅಲ್ಲದೆ ಬಿಜೆಪಿಯೇ ಒಪ್ಪಿಕೊಂಡಂತೆ ಒಟ್ಟು ಸಚಿವ ಸಂಪುಟದಲ್ಲಿ ಸುಮಾರು 30 ಸಚಿವರು ಪ್ರಬಲ ಸಮುದಾಯಕ್ಕೆ ಸೇರಿದ್ದು, ಇದು ಸಚಿವ ಸಂಪುಟದ ಶೇಕಡ 40ರಷ್ಟು ಆಗಿರುತ್ತದೆ. ಜನರನ್ನು ವಂಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಬಿಜೆಪಿ ಸಾಮಾಜಿಕ ನ್ಯಾಯದ ಹೆಸರಲ್ಲಿ ಸುಳ್ಳು ಹೇಳುತ್ತಿದೆ ಎಂದು ರಮೇಶ್ ಬಾಬು ದೂರಿದರು.
ಕರ್ನಾಟಕದ ಬಿಜೆಪಿ ನಾಯಕರು ಕರ್ನಾಟಕಕ್ಕೆ 6 ಸಚಿವ ಸ್ಥಾನ ದೊರೆತಿರುವುದಾಗಿ ಹೇಳಿಕೊಂಡಿರುತ್ತಾರೆ. ಕರ್ನಾಟಕದಿಂದ 25 ಸಂಸದರನ್ನು ಪಡೆದಿರುವ ಬಿಜೆಪಿ ಇಲ್ಲಿಯೂ ಕರ್ನಾಟಕಕ್ಕೆ ಅನ್ಯಾಯ ಮಾಡಿ ಸಾಮಾಜಿಕ ನ್ಯಾಯದ ಹೆಸರನ್ನು ಹೇಳುತ್ತಿದೆ. ಕರ್ನಾಟಕದಿಂದ ಸಚಿವರಾಗಿರುವವರ ಪೈಕಿ 3 ಮಂದಿ ಒಂದೇ ಜಾತಿಯ ಪ್ರಬಲ ಸಮುದಾಯಕ್ಕೆ ಸೇರಿದ್ದು ಅದರಲ್ಲಿ ಪ್ರಲ್ಹಾದ್ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್ ಸಂಪುಟ ದರ್ಜೆಯ ಸಚಿವರಾಗಿರುತ್ತಾರೆ. ಕರ್ನಾಟಕದ ಇತರೆ ಸಮುದಾಯಗಳಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಹಿಂದುಳಿದ ವರ್ಗದವರಿಗೆ ಸಚಿವ ಸ್ಥಾನ ನೀಡದೆ ಮೋಸ ಮಾಡಲಾಗಿದೆ ಎಂದು ಅವರು ವಾಸ್ತವದತ್ತ ಬೊಟ್ಟು ಮಾಡಿದ್ದಾರೆ.
ದಲಿತರಿಗೂ ಅನ್ಯಾಯ:
ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ 32 ಸದಸ್ಯರು ಭಾರತೀಯ ಜನತಾ ಪಕ್ಷಕ್ಕೆ ಸೇರಿವರಾಗಿದ್ದು, ಇದರಲ್ಲಿ ಒಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರನ್ನು ಸದಸ್ಯರನ್ನಾಗಿ ಮಾಡಿರುವುದಿಲ್ಲ. ಕರ್ನಾಟಕ ಬಿಜೆಪಿಯ ಎಸ್‍ಸಿ(ಪರಿಶಿಷ್ಟ ಜಾತಿ) ಮೋರ್ಚ ಅಧ್ಯಕ್ಷರು ಬಿಜೆಪಿಯಿಂದ ವಿಧಾನ ಪರಿಷತ್ತಿನ ಸದಸ್ಯರಾಗಲು ಅಂಗಲಾಚುತ್ತಿದ್ದು, ಅವರಿಗೆ ವಿಧಾನ ಪರಿಷತ್ತಿನ ಆಸೆ ತೋರಿಸಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ
ಭಾರತೀಯ ಜನತಾ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಬಗ್ಗೆ ಬೂಟಾಟಿಕೆಯನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಸಿದ್ಧಾಂತವಾದ ಸಾಮಾಜಿಕ ನ್ಯಾಯವನ್ನು ವಾಸ್ತವದಲ್ಲಿ ಅಳವಡಿಸಿಕೊಂಡು ನಿಜವಾಗಿ ದಲಿತರಿಗೆ ಅವಕಾಶಗಳನ್ನು ನೀಡಲಿ. ಕರ್ನಾಟಕದ ಹಿಂದುಳಿದ, ದಲಿತ ಹಾಗೂ ಇತರೆ ಸಮುದಾಯಗಳಿಗೆ ಸಂಪುಟ ದರ್ಜೆಯ ಸ್ಥಾನ ನೀಡದ ಕೇಂದ್ರ ಸರ್ಕಾರ, ಕರ್ನಾಟಕದ ವಿಧಾನ ಪರಿಷತ್ತಿಗೆ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಅವಕಾಶ ನೀಡದೆ ದಲಿತರಿಗೆ ವಂಚನೆ ಮಾಡಿರುತ್ತದೆ. ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವುದನ್ನು ಬಿಟ್ಟು ಭಾರತೀಯ ಜನತಾ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ವರ್ಗಗಳಿಗೆ ಅವಕಾಶ ನೀಡಲಿ ಎಂದು ರಮೇಶ್ ಬಾಬು ಸಲಹೆ ಕಿವಿಮಾತು ಹೇಳಿದ್ದಾರೆ.