ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ವಿಸ್ತರಣೆಯು ಕೇಂದ್ರ ಸರ್ಕಾರದ ಆಡಳಿತ ವೈಖರಿಗೆ ಶಕ್ತಿ ಚೈತನ್ಯ ತುಂಬಿದೆ ಎಂಬುದು ಕೇಸರಿ ಪಾಳಯದ ಸಂತಸದ ನುಡಿ. ಅದರಲ್ಲೂ ಬಿಜೆಪಿಯ ಮಾತೃ ಸಂಘಟನೆಯಿಂದ ಬಂದ ಶೋಭಾ ಕರಂದ್ಲಾಜೆ ಅವರ ಸೇರ್ಪಡೆ ಆರೆಸ್ಸೆಸ್ ವಲಯದಲ್ಲೂ ಸಂತಸದ ಸನ್ನಿವೇಶಕ್ಕೆ ಕಾರಣವಾಗಿದೆ. ಅದರಲ್ಲೂ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರ ದಂಡು ದೆಹಲಿಗೆ ತೆರಳಿದ್ದು, ಶೋಭಾ ಕರಂದ್ಲಾಜೆ ಅವರ ಪದಗ್ರಹಣ ಸಮಾರಂಭದ ಹರ್ಷ ಕ್ಷಣವನ್ನು ಕಣ್ತುಂಬಿಕೊಂಡಿತು.
ಶಿಕ್ಷಣದ ಹೊಸಿಲಿನಲ್ಲೇ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತೆಯಾಗಿ, ವಿಸ್ತಾರಕಿಯಾಗಿ, ಪ್ರಚಾರಿಕರಾಗಿ ಪೂರ್ಣಾವಧಿಯನ್ನು ಹಿಂದೂ ಸಂಘಟನೆಗಾಗಿ ಮೀಸಲಿಟ್ಟಿರುವವರು ಶೋಭಾ ಕರಂದ್ಲಾಜೆ. ಅವರ ಬದುಕಿನ ಪಯಣದುದ್ದಕ್ಕೂ ಜೊತೆಗಾತಿಯಾಗಿದ್ದ ಪ್ರಮಿಳಾ ನಾಯ್ಡು, ಭಾರತೀ ಶೆಟ್ಟಿ ಸಹಿತ ರಾಜ್ಯದ ವನಿತೆಯರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಸಹಿತ ಸಮಿತಿಯಿಂದ ಭಾಜಪಕ್ಕೆ ಬಂದಿರುವ ನಾಯಕಿಯರು ಇಂದು ಶೋಭಾ ಕರಂದ್ಲಾಜೆ ಅವರು ಕೇಂದ್ರ ಕೃಷಿ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸ್ಪೂರ್ತಿಯ ಕೇಂದ್ರಬಿಂದುವಿನಂತಿದ್ದರು. ಸಚಿವೆಗೆ ಸಲಹೆ ಸೂಚನೆ ನೀಡುತ್ತಾ ಈ ಪ್ರಮುಖರು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು.
ಇದೇ ವೇಳೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡುು ಪ್ರತಿಕ್ರಿಯಿಸಿ, ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂತ್ವಕ್ಕಾಗಿ ದುಡಿದ ಕಾರ್ಯಕರ್ತೆಗೆ ನ್ಯಾಯ ಕೊಟ್ಟಿದ್ದಾರೆ. ಅವರ ಸೇವೆಯು ದೇಶಪ್ರೇಮಿ ಸಮಿತಿಯ ಕಾರ್ಯಕರ್ತೆಯರಿಗೆ ಸ್ಫೂರ್ತಿಯಾಗಲಿದೆ ಎಂದರು.
ಶೋಭಾ ಕರಂದ್ಲಾಜೆಯವರು ದಶಕಗಳಿಂದಲೂ ಶಾಸನಸಭೆಯ ಸದಸ್ಯರಾಗಿ, ಉತ್ತಮ ಸಂಸದೀಯ ಪಟು ಎನಿಸಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ರಾಜ್ಯದ ಸಚಿವೆಯಾಗಿ, ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮವಹಿಸಿದವರು. ಈ ಅನುಭವವು ಇದೀಗ ಕೇಂದ್ರ ಸಚಿವರಾಗಿ ಕೈಗೊಳ್ಳುವ ಕ್ರಮಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಮಿಳಾ ನಾಯ್ಡು ಹೇಳಿದರು.
ಇದೇ ವೇಳೆ, ಪ್ರಮೀಳಾ ನಾಯ್ಡು ಹಾಗೂ ಭಾರತೀ ಶೆಟ್ಟಿಯವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. ಕೋವಿಡ್ ಸಂಕಟ ಕಾಲದಲ್ಲಿ ಜನಪರ ಕಾರ್ಯಕ್ರಮಗಳನ್ನು ಕೈಗೊಂಡ ಸಚಿವೆಯನ್ನು ಈ ನಾಯಕಿಯರು ಅಭಿನಂದಿಸಿದರು.