ಬೆಂಗಳೂರು: ನಗರಾಭಿವೃದ್ಧಿ ಹಾಗೂ ಬಿಬಿಎಂಪಿ ಮಹದೇವಪುರ ವಲಯದ ಕೊರೊನಾ ನಿಯಂತ್ರಣ ಉಸ್ತುವಾರಿಯಾಗಿರುವ ಸಚಿವರಾದ ಬಿ.ಎ.ಬಸವರಾಜ ಅವರು ಇಂದು ಬೆಳ್ಳಂ ಬೆಳಿಗ್ಗೆ ಬೆಂಗಳೂರಿನ ಐಟಿಐ ಆಸ್ಪತ್ರೆ ಹಾಗು ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಂಚಲನ ಮೂಡಿಸಿದರು.
ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಐಟಿಐ ಆಸ್ಪತ್ರೆಯಲ್ಲಿ ೧೦೦ ಕೋವಿಡ್ ಬೆಡ್ ಗಳು ಮಾಡುವ ಬಗ್ಗೆ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು. ಈಗಾಗಲೇ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಜೊತೆ ಚರ್ಚೆ ಮಾಡಿರುವುದಾಗಿ ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿ ಐಟಿಐ ಆಸ್ಪತ್ರೆ ಇದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್ ಮಾಡುವುದರಿಂದ ಕೊರೊನಾ ಸೋಂಕಿತರಿಗೆ ಅನುಕೂಲವಾತ್ತದೆ. ಹೀಗಾಗಿ ಕೇಂದ್ರ ಸಚಿವ ಸದಾನಂದಗೌಡರಿಗೆ ಮನವಿ ಮಾಡಿಕೊಂಡಿರುವುದಾಗಿ ಬಸವರಾಜ ತಿಳಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಇನ್ನೆರಡು ದಿನಗಳಲ್ಲಿ ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆಯಾಗಿ ಚಿಕಿತ್ಸೆ ನೀಡುವ ಭರವಸೆಯನ್ನು ಅವರು ನೀಡಿದರು.
ಇದೇ ವೇಳೆ, ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಚಿವ ಬಸವರಾಜ್, ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ರೀತಿ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.