ಬೆಂಗಳೂರು: ರಾಜ್ಯದ ರೈತರ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಅಕ್ರಮ ಗಣಿಗಾರಿಕೆಯಿಂದ ಸಂಕಷ್ಟ ಎದುರಾಗಿದೆ ಎಂದು ಪರಿಸರವಾದಿಗಳಷ್ಟೇ ಅಲ್ಲ, ಸ್ಥಳೀಯ ಸಂಸದರೇ ಅತಂಕ ವ್ಯಕ್ತಪಡಿಸಿದ್ದಾರೆ. ಈ ಅಕ್ರಮ ಗಣಿಗಾರಿಕೆ ವಿರುದ್ದ ಸಿಡಿದೆದ್ದಿರುವ ಸಂಸದೆ ಸುಮಲತಾ ಅವರು ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ಬಗ್ಗೆಯೂ ಆಕ್ರೋಶ ಹೊರಹಾಕಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಕೋರಿ ಸಂಸದೆ ಸುಮಲತಾ ಅಂಬರೀಶ್ ಅವರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ತಾವು ಖುದ್ದು ಗಣಿಗಾರಿಕೆ ಅಡ್ಡೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಈ ನಡುವೆ, ಅಕ್ರಮ ಗಣಿಗಾರಿಕೆ ತಡೆಯಬೇಕೆಂಬ ಆಗ್ರಹ ಒಂದೆಡೆಯಾದರೆ, ಕೆಆರ್ ಎಸ್ ಅಣೆಕಟ್ಟನ ಸುತ್ತಮುತ್ತಲೂ ಪ್ರಯೋಗಿಕವಾಗಿ ಸ್ಪೋಟಕ ವಸ್ತಗಳನ್ನು ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಕುರಿತಂತೆ ಸ್ವತಃ ಸಚಿವ ಮುರುಗೇಶ್ ನಿರಾಣಿ ಅವರೇ ಮಾಹಿತಿ ಹಂಚಿಕೊಂಡು ಪರಿಸರವಾದಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಪುಣೆಯಲ್ಲಿರುವ ಕೇಂದ್ರ ಜಲ ಮತ್ತು ಇಂಧನ ಸಂಶೋಧನಾ ಸಂಸ್ಥೆ ಮೂಲಕ ಕೆಆರ್ ಎಸ್ ಅಣೆಕಟ್ಟನ ಸುತ್ತಮುತ್ತಲೂ ಪ್ರಯೋಗಿಕವಾಗಿ ಸ್ಪೋಟಕ ವಸ್ತಗಳನ್ನು ಬಳಸುವ ಕುರಿತಾಗಿ ಪರೀಕ್ಷೆ ನಡೆಸಲು ತೀಮಾನಿಸಲಾಗಿದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಸ್ಪೋಟಕಗಳನ್ನು ಬಳಕೆ ಮಾಡಬಹುದು? ಇದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದರು.
ಈ ಹಿಂದೆಯೇ ಇದು ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ವಿಳಂಬವಾಗಿದೆ. ತಕ್ಷಣವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದವರು ತಿಳಿಸಿದರು.
ಸಂಸದೆ ಸುಮಲತಾ ಅಂಬರೀಷ್ ಅವರು, ಕೆಆರ್ ಎಸ್ ಅಣೆಕಟ್ಟು, ಮಂಡ್ಯದ ಬಗ್ಗೆ ಕಳಕಳಿ ಹಾಗೂ ಸಾವಜನಿಕರ ಬಗ್ಗೆ ಕಳಕಳಿ ಇಟ್ಟುಕೊಂಡು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮ್ಮ ಸಕಾರ ಯಾವುದೇ ಕಾರಣಕ್ಕೂ ಆಕ್ರಮ ಗಣಿಕಾರಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಸಚಿವ ನಿರಾಣಿ ಅವರು ಮತ್ತೊಮ್ಮೆ ಪುನರುಚ್ಚರಿಸಿದರು.