ದೆಹಲಿ: ಕಾಂಗ್ರೆಸ್ ಸಂಸದ ಜಿ.ಸಿ.ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ನಾಡು-ನುಡಿ ಪರ ಪ್ರಶ್ನೆಗಳನ್ನು ಎತ್ತುವ ಮೂಲಕ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ, ಸಬ್ ಅರ್ಬನ್ ರೈಲು ವಿಚಾರದಲ್ಲಿ ಬೆಂಗಳೂರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅವರ ಆಕ್ಷೇಪ ಕೇಂದ್ರ ಸರ್ಕಾರವನ್ನು ಬಡಿದೆಬ್ಬಿಸಿದಂತಿತ್ತು. ಈ ಎರಡೂ ವಿಚಾರಗಳು ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದ್ದಾಗಿದ್ದರೂ ಜನರ ಪಾಲಿಗೆ ಭಾವನಾತ್ಮಕ ಸಂಗತಿ. ಈ ಸೂಕ್ಷ್ಮತೆಯನ್ನು ಅರಿತ ಕೇಂದ್ರ ಸರ್ಕಾರ ಜಾಣ್ಮೆಯಿಂದಲೇ ಪ್ರತಿಕ್ರಿಯಿಸಿ, ಈ ಬಗ್ಗೆ ತಕ್ಷಣವೇ ಕಾರ್ಯೋನ್ಮುಖವಾಗುವ ಭರವಸೆ ನೀಡಿದೆ.
ಸಂಸದ ಜಿ.ಸಿ.ಚಂದ್ರಶೇಖರ್ ಅವರ ಪ್ರಶ್ನೆಯ ಸರದಿ ಬಂದಾಗ, ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಅವರು ಕೇಂದ್ರ ಸರ್ಕಾರವನ್ನು ಚುಚ್ಚಿದರು. ಅವರಿಗೆ ಹೆಚ್ಚೇನೂ ಮಾತನಾಡಲು ಸಮಯಾವಕಾಶ ಸಿಗಲಿಲ್ಲವಾದರೂ ಕೆಲವೇ ನಿಮಿಷಗಳ ಅವಧಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಂಗತಿಯನ್ನು ಚುಟುಕಾಗಿಯೇ ಹೇಳಿ ಸರ್ಕಾರದ ಆಡಳಿತ ವೈಖರಿಯನ್ನು ಕೆಣಕಿದರು. ಕನ್ನಡ ಅಧಿಕೃತ ಭಾಷೆಯಗಿದ್ದರೂ ಕೇಂದ್ರ ಸರ್ಕಾರ ಕನ್ನಡದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕ ಹಾಕಲು ಯಾವ ಸಮಸ್ಯೆ ಇದೆ? ಎಂದು ಚಂದ್ರಶೇಖರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಕೇಂದ್ರ ಸರ್ಕಾರ ಸಕಾರಣ ನೀಡಬೇಕೆಂದು ಒತ್ತಾಯಿಸಿದರು. ಜಿ.ಸಿ. ಚಂದ್ರಶೇಖರ್ ಅವರ ಪ್ರಶ್ನೆಗೆ ಸಭಾಪತಿ ಸ್ಥಾನದಲ್ಲಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ರಾಜ್ಯಗಳ ಮೆಟ್ರೋದಲ್ಲೂ ಸ್ಥಳೀಯ ಭಾಷೆಯನ್ನು ಬಳಸಬೇಕು. ತ್ರಿಭಾಷಾ ಸೂತ್ರ ಪಾಲಿಸಬೇಕು ಎಂದು ಸರ್ಕಾರಕ್ಕೆ ವೆಂಕಯ್ಯ ನಾಯ್ಡು ಸೂಚನೆ ನೀಡಿದರು.
ಈ ವೇಳೆ, ಉತ್ತರಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪೂರಿ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕ ಇಲ್ಲದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೂಡಲೇ ಈ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಬೆಂಗಳೂರು ಸಬ್ ಅರ್ಬನ್ ಯೋಜನೆಯ ಕೆಲಸವನ್ನು ಆರಂಭಿಸಲು ತಡ ಆಗುತ್ತಿರುವ ಬಗ್ಗೆ ಕೂಡ ಜಿ.ಸಿ.ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು. ಬೆಂಗಳೂರು ವಿಶ್ವದಲ್ಲೇ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುತ್ತಿರುವ ನಗರವೆನಿಸಿದೆ. ಹಾಗಾಗಿಯೇ. 2018-19ರಲ್ಲಿ ಬೆಂಗಳೂರು ಸಬ್ ಅರ್ಬನ್ ಯೋಜನೆ ಘೋಷಣೆ ಮಾಡಲಾಗಿದೆ. ಆದರೆ ಈವರೆಗೆ ಕೆಲಸ ಆರಂಭವಾಗಿಲ್ಲ. ಅದಕ್ಕೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು. 2018-19ರ ಬಜೆಟ್‌ನಲ್ಲಿ ಬೆಂಗಳೂರು ಸಬ್ ಅರ್ಬನ್ ಯೋಜನೆಯನ್ನು ಘೋಷಿಸಲಾಗಿದೆ. ಆದರೆ ಸುಮಾರು 72 ಕಿಲೋ ಮೀಟರ್ ಯೋಜನೆಗೆ ಕೇಂದ್ರ ಸರ್ಕಾರ ಸಾಂಕೇತಿಕವಾಗಿ ಮಾತ್ರ ಹಣ ಬಿಡುಗಡೆ ಮಾಡಿದೆ ಎಂಬ ಸಂಗತಿಯತ್ತ ಬೆಳಕು ಚೆಲ್ಲಿದರು.
ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಸಂಸದ ಜಿ.ಸಿ. ಚಂದ್ರಶೇಖರ್ ಅವರ ಈ ಸರಣಿ ಪ್ರಶ್ನೆಗಳಿಂದ ಗಲಿಬಿಲಿಗೊಂಡ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪೂರಿ, ಬೆಂಗಳೂರು ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರ ಭೂಮಿಯನ್ನು ವಶಪಡಿಸಿಕೊಳ್ಳಬೇಕಿದೆ. ಎರಡು ಕಡೆ ಅರಣ್ಯ ಪ್ರದೇಶ ಇದೆ. ಅಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕಿದೆ. ಜೊತೆಗೆ ನ್ಯಾಯಾಲಯದಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಧಾವೆಯು ವಿಚಾರಣಾ ಹಂತದಲ್ಲಿರುವುದರಿಂದ ಯೋಜನೆಯ ಆರಂಭ ವಿಳಂಬವಾಗಿದೆ ಎಂದು ಉತ್ತರಿಸಿದರು. ರಾಜ್ಯ ಸರ್ಕಾರ ಭೂಮಿ ವಶಪಡಿಸಿಕೊಂಡರೆ ಕೇಂದ್ರ ಸರ್ಕಾರದಿಂದ ಹಣ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.