ಬೆಂಗಳೂರು: ‘ಮೇಕೆದಾಟು ಅಣೆಕಟ್ಟೆ ನಮ್ಮ ಪಾಲಿನ ನೀರು ಬಳಸಿಕೊಳ್ಳುವ ಯೋಜನೆ. ಈ ಯೋಜನೆ ಮಾಡಬಾರದು ಎಂದು ಯಾವ ಆದೇಶವೂ ಇಲ್ಲ. ಹೀಗಾಗಿ ಸರ್ಕಾರ ಯೋಜನೆ ಆರಂಭಿಸಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುದ ಅವರು, ‘ಮೇಕೆದಾಟು ಯೋಜನೆಯಿಂದ ಒಂದು ಎಕರೆಯೂ ನೀರಾವರಿ ಆಗುವುದಿಲ್ಲ. ವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ತಮಿಳುನಾಡಿನ ಬಿಜೆಪಿ, ಡಿಎಂಕೆ ಅಥವಾ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ನಮ್ಮ ಮುಖ್ಯಮಂತ್ರಿಗಳು ನೀರಾವರಿ ಸಚಿವರಾಗಿದ್ದವರು. ಅವರಿಗೆ ಈ ಯೋಜನೆ ಬಗ್ಗೆ ಅರಿವಿದೆ. ಅವರು ಯೋಜನೆ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ ಎಂದರು.
ಪರಿಸರ ಇಲಾಖೆ ಅನುಮತಿ ಸಿಕ್ಕಿರುವಾಗ ನಮ್ಮ ಸಿಎಂ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಇತರೆ ಇಲಾಖೆಗಳ ಅನುಮತಿ ಪಡೆದು, ಆದಷ್ಟು ಬೇಗ ಗುದ್ದಲಿ ಪೂಜೆ ಮಾಡಿ, ಕೆಲಸ ಆರಂಭಿಸಲಿ. ಬೇರೆಯವರ ಮೇಲೆ ದೂರುತ್ತಾ ಕೂರುವುದಲ್ಲ. ಕೆಲಸ ಆರಂಭಿಸಬೇಡಿ ಎಂದು ಯಾವುದಾದರೂ ಆದೇಶ ಇದೆಯಾ? ನೀವು ಕೆಲಸ ಆರಂಭಿಸಿ. ನಿಮಗೆ ಬೇಕಾದ ಎಲ್ಲ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ಹೇಳುತ್ತಿದ್ದೇವೆ. ಅವರು ಯಾಕೆ ಇಚ್ಛಾಶಕ್ತಿ ತೋರುತ್ತಿಲ್ಲವೋ ಗೊತ್ತಿಲ್ಲ ಎಂದವರು ಹೇಳಿದರು