ದೆಹಲಿ: ಜೀವಜಲ ಸಮಸ್ಯೆ ಬಗೆಹರಿಸುವ ಸಂಬಂಧದ ಮೇಕೆದಾಟು ಯೋಜನೆಯು ಇದೀಗ ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಸಾಂಪ್ರದಾಯಿಕ ವೈರುದ್ಯವನ್ನು ಹೆಚ್ಚಿಸಿದೆ. ಅದರಲ್ಲೂ ಕೇಂದ್ರದ ಅನುಮೋದನೆ ಸಿಕ್ಜಿದ್ದು ಅರಣ್ಯ ಇಲಾಖೆ ಮಾತ್ರ ಗ್ರೀನ್ ಸಿಗ್ನಲ್ ನೀಡಬೇಕಿದೆ. ಆದೇ ಹೊತ್ತಿಗೆ ನಿವೃತ್ತ ಅಣ್ಣಾಮಲೈ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ನಡೆದಿರುವ ಹೋರಾಟವು ಉಭಯ ರಾಜ್ಯಗಳ ನಡುವೆ ಸಂಘರ್ಷದ ಕಿಚ್ಚು ಹಚ್ಚಿಸಿದೆ.
ಈ ನಡುವೆ ಅಣ್ಣಾಮಲೈ ಪೋಸ್ಟನ್ಬು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ರಿಟ್ವೀಟ್ ಮಾಡಿದ್ದಾರೆಂದು ಆರೋಪಿಸಿ, ಕಾಂಗ್ರೆಸ್ ಈ ವಿಚಾರಕ್ಕೆ ಬೇರೊಂದು ಅರ್ಥ ನೀಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ನಡುವೆ, ಮೇಕೆದಾಟು ವಿಚಾರ ಕುರಿತಂತೆ ಉದಯ ನ್ಯೂಸ್ ಜೊತೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ನಾಯಕರೂ ಆದ ಸಿ.ಟಿ.ರವಿ, ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ವಿವಾದ ಎಬ್ಬಿಸುವುದು ಸರಿಯಲ್ಲ. ಇದು ರಾಜಕೀಯ ಮಾಡುವಂತಹ ವಿಚಾರವೇ ಅಲ್ಲ. ಇದು ರಾಜ್ಯದ ಜನರಿಗೆ ಜೀವ ಜಲ ಒದಗಿಸುವ ಸಂಜೀವಿನಿ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಕಾವೇರಿ ವಿಚಾರ ಬಂದಾಗ ತಮಿಳುನಾಡು ಸರ್ಕಾರದ ಅಭಿಪ್ರಾಯ ವಿಭಿನ್ನವಾಗಿರುವುದು ಸಹಜವೇ. ಹೀಗಿರುವಾಗ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡಿಗೆ ಮನವರಿಕೆ ಮಾಡಬೇಕಿದೆ ಎಂದು ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಧಾನಕ್ಕೆ ಮುಂದಾಗಿ: ಸರ್ಕಾರಕ್ಕೆ ಸಲಹೆ..
ಮೇಕೆದಾಟು ಯೋಜನೆ ಕುರಿತಂತೆ ವಿವಾದ ಉಲ್ಬಣಗೊಳ್ಳುವ ಮೊದಲು ಸಂಧಾನಕ್ಕೆ ಮುಂದಾಗಬೇಕಿದೆ. ಇದು ಚೌಕಾಸಿಯ ನಡೆಯಾಗಿರದೆ, ಯೋಜನೆಯ ಬಗ್ಗೆ ಸ್ಪಷ್ಟಪಡಿಸುವ ನಡೆಯಾಗಿರಬೇಕಿದೆ ಎಂದವರು ಪ್ರತಿಪಾದಿಸಿದ್ದಾರೆ.
ಕೆಆರ್‌ಎಸ್‌ನಿಂದಲೇ ನೀರು ಹರಿಸಿದವರು ನಾವು..
ಮೇಕೆದಾಟು ಪರೀಕಲ್ಪನೆಯ ಮೊದಲೇ ನಾವು ತಮಿಳುನಾಡಿಗೆ ಹಲವು ಬಾರಿ ನೀರು ಕೊಟ್ಟಿದ್ದೇವೆ. ಸುಪ್ರೀಂ ಆದೇಶ ಹಿನ್ನೆಲೆಯಲ್ಲಿ, ರಾಜ್ಯವು ತನ್ನ ಹಿತಾಸಕ್ತಿಯನ್ನೇ ತ್ಯಾಗ ಮಾಡಿ ಕೆಆರ್‌ಎಸ್‌ನಿಂದಲೇ ಬಿಡುಗಡೆ ಮಾಡಿದ ಇತಿಹಾಸವಿಲ್ಲವೇ? ಹೀಗಿರುವಾಗ ಮೇಕೆದಾಟು ಅಣೆಕಟ್ಟು ಕೂಡಾ ತಮಿಳುನಾಡಿನ ಪಾಲಿಗೆ ಹೆಚ್ಚು ವರದಾನ ಎಂಬ ಮಹತ್ವವನ್ನು ಆ ರಾಜ್ಯಕ್ಕೆ ಸ್ಪಷ್ಟಪಡಿಸಬೇಕಿದೆ ಎಂದವರು ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ತಮಿಳು ಭಾಷಿಗರಿದ್ದಾರೆ. ತಮಿಳುನಾಡಿನಿಂದ ವಲಸೆ ಬಂದಿರುವ ಲಕ್ಷಾಂತರ ಕುಟುಂಬಗಳಿಗೂ ಈ ಅಣೆಕಟ್ಟಿನಿಂದ ಕುಡಿಯುವ ನೀರು ಸಿಗಲಿದೆ. ಈ ವಿಚಾರವನ್ನೂ ತಮಿಳುನಾಡಿನ ಪ್ರತಿಭಟನಾಕಾರರಿಗೆ ಮನದಟ್ಟು ಮಾಡಿಕೊಡಬೇಕಿದೆ ಎಂದು ಸಿ.ಟಿ.ರವಿ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಎರಡೂ ರಾಜ್ಯಗಳಿಗೆ ಆಪತ್ಕಾಲದಲ್ಲಿ ವರದಾನವಾಗಬಲ್ಲ ಈ ಯೋಜನೆಯ ವಿಚಾರದಲ್ಲಿ ಕಲಹ ಏರ್ಪಡದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಅನಗತ್ಯವಾಗಿ ಜಗಳ ಮುಂದುವರಿದಲ್ಲಿ, ಈ ಸನ್ನಿವೇಶವನ್ನು ಸಮಾಜಘಾತುಕ ಶಕ್ತಿಗಳು ಬಳಸಿಕೊಳ್ಳಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ನಮ್ಮದು ರಾಷ್ಟ್ರೀಯತೆಯ ಸಿದ್ದಾಂತ. ಆದರೆ ಪ್ರಾದೇಶಿಕ ವಿಚಾರ ಹಾಗೂ ನಮ್ಮತನದ ವಿಚಾರ ಬಂದಾಗ ತವರೂರಿಗೇ ನಮ್ಮದು ಪ್ರಾಮುಖ್ಯತೆ. ಹಾಗಾಗಿ ಕರ್ನಾಟಕದ ಜನಪ್ರತಿನಿಧಿಗಳು ರಾಜ್ಯದ ಹಿತಾಸಕ್ತಿಗೆ ಹೋರಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಮಯವೇ ಸಂಧಾನಕ್ಕೆ ಸಕಾಲ. ಕೇಂದ್ರ ಜಲಶಕ್ತಿ ಸಚಿವರು ತಿಳಿಸಿರುವಂತೆ ತಮಿಳುನಾಡು ಸರ್ಕಾರದ ಸಹಮತ ಪಡೆಯಬೇಕಾದರೆ ಮೊದಲು ಅವರಿಗೆ ಪರಿಸ್ಥಿತಿ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕಿದೆ ಎಂದು ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ.