ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎಂಸಿ&ಎ ನಿಗಮದಲ್ಲಿ ಅವ್ಯವಹಾರ ನಡೆದಿದೆಯೇ? ಇಂತಹಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಈ ನಿಗಮದ ಅಧಿಕಾರಿಗಳ ನಡೆ. ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಸಾಮಾಜಿಕ ಹೋರಾಟಗಾರರು ಸಮರ ಸಾರಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಹಾಗೂ ಕೋರಿದ ದಾಖಲೆ ನೀಡಲು ನಿರಾಕರಿಸುತ್ತಿರುವ ನಿಗಮದ ಅಧಿಕಾರಿಗಳ ನಿಲುವಿನ ವಿರುದ್ದ ವಿನೂತನ ಪ್ರದರ್ಶನ ನಡೆದಿದೆ.
ಏನಿದು ವಿವಾದ?
ರಾಜ್ಯ ಸರ್ಕಾರದ ನಿಗಮಗಳಲ್ಲಿ ಅನುದಾನ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರು ನಿಗಮಗಳಿಂದ ಮಾಹಿತಿ ಕೇಳಿದ್ದಾರೆ. ಬಹುತೇಕ ನಿಗಮಗಳು ಮಾಹಿತಿ ನೀಡಿವೆಯಾದರೂ ಎಂಸಿ&ಎ ಸಹಿತ ಕೆಲವು ನಿಗಮಗಳು ದಾಖಲೆಗಳನ್ನು ನೀಡಲು ಹಿಂದೇಟು ಹಾಕಿವೆ. ಅದರಲ್ಲೂ ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಂಸಿ&ಎ ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬುದು ನಮೋ ಸಮಾಜ್ ಮುಖ್ಯಸ್ಥ ಜಿ.ಆರ್.ಅನಿಲ್ ಕುಮಾರ್ ಅವರ ಅಸಮಾಧಾನ.
ಸರ್ಕಾರಿ ಸಂಸ್ಥೆಗಳು ಆರ್ಟಿಐ ವ್ಯಾಪ್ತಿಗೆ ಬರುತ್ತಿದ್ದು ಸರ್ಕಾರಿ ಅನುದಾನದ ಲೆಕ್ಕವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಬೇಕು ಎಂಬುದು ಮಾಹಿತಿ ಆಯೋಗದ ಆದೇಶ. ಹೀಗಿದ್ದರೂ ಎಂಸಿ&ಎ ಸಂಸ್ಥೆಯ ಅಧಿಕಾರಿಗಳು ಆರ್ಟಿಐ ಕಾಯ್ದೆಯನ್ನು ತಿರಸ್ಕರಿಸಿ ಸಂವಿಧಾನದ ನಿಯಮಾವಳಿಗಳನ್ನೇ ಉಲ್ಲಂಘಿಸಿದ್ದಾರೆ ಎಂಬುದು ಈ ಸಾಮಾಜಿಕ ಕಾರ್ಯಕರ್ತರ ಆರೋಪ.
ಈ ಸಂಬಂಧ ಬೆಂಗಳೂರಿನ ವಸಂತನಗರದಲ್ಲಿರುವ ಎಂಸಿ&ಎ ಕಚೇರಿ ಬಳಿ ನಡೆದ ಪ್ರದರ್ಶನ ಗಮನಸೆಳೆದಿದೆ.