ಮಂಗಳೂರು: ಕಟ್ಟಡಗಳು ಮಾಸ್ಕ್ ಧರಿಸುವುದು ಸಾಧ್ಯವೇ?
ಒಂದಿಲ್ಲೊಂದು ಅವಾಂತರಗಳಿಂದಾಗಿ ಸುದ್ದಿಗೆ ಗ್ರಸವಾಗುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಇದೀಗ ಕಟ್ಟಡಗಳೂ ಮಾಸ್ಕ್ ಧರಿಸಬೇಕೆಂದು ಫರ್ಮಾನು ಹೊರಡಿಸಿದೆಯೇ ಎಂಬ ಚರ್ಚೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಈ ರಶೀದಿ. ಸಾಮಾಜಿಕ ಜಾಲತಾಣಗಳಲ್ಲಿ ಈ ರಶೀದಿಯ ಫೊಟೋ ಹರಿದಾಡುತ್ತಿದ್ದು ಇದರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿನ ಉಲ್ಲೇಖವಿದೆ. ಇದು ಅಚ್ಚರಿ ಹಾಗೂ ಕುತೂಹಲ ಸೃಷ್ಟಿಸಿದೆ.
ಏನಿದು ಅಸಲಿ ಸತ್ಯ?
ಕೊರೋನಾ ವೈರಾಣು ಎಲ್ಲೆಲ್ಲೂ ತಲ್ಲಣ ಸೃಷ್ಟಿಸಿದೆ. ಜಗತ್ತಿನಾದ್ಯಂತ ಮರಣ ಮೃದಂಗ ಸೃಷ್ಟಿಸಿರುವ ಕೊರೋನಾ ವೈರಾಣು ಸೋಂಕು ತಡೆಯಲು ವ್ಯಾಪಕ ಕ್ರಮವಹಿಸಲಾಗುತ್ತಿದೆ. ಪ್ರತಿಯೊಬ್ನರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕಾಯ್ದುಕೊಳ್ಳುವುದು ಕಡ್ಡಾಯ ನಿಯಮವಾಗಿದೆ.
ಆದರೆ ಕಟ್ಟಡಗಳೂ ಮಾಸ್ಕ್ ಧರಿಸುವುದು ಸಾಧ್ಯವೇ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ರಶೀದಿಯ ಫೊಟೋವನ್ನು ಗಮನಿಸಿದರೆ ಕಟ್ಟಡಗಳೂ ಮಾಸ್ಕ್ ಧರಿಸಲೇಬೇಕು ಎಂಬ ಸಂದೇಶವನ್ನು ಸಾರುವಂತಿದೆ.
ಮಂಗಳೂರಿನ ಕಂಕನಾಡಿಯ ಚರ್ಚ್ ಹಾಲ್ ಮಾಸ್ಕ್ ಧರಿಸದ ಕಾರಣಕ್ಕಾಗಿ ಹಾಗೂ ಆ ಕಟ್ಟಡ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಅಪರಾಧಕ್ಕಾಗಿ ಬರೋಬ್ಬರಿ 5000 ರೂಪಾಯಿ ವಸೂಲಿ ಮಾಡಲಾದ ರಶೀದಿ ಇದು.!?
ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದು ಎಲ್ಲಾ ಕಡೆ ಸಾಮಾನ್ಯವೆನಿಸಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಸ್ಕ್ ಕಡ್ಡಾಯದ ನಿಯಮ ಉಲ್ಲಂಘನೆಯಾದಲ್ಲಿ ಕಾರ್ಯಕ್ರಮ ಆಯೋಜಕರಿಗೆ ದಂಡ ವಿಧಿಸಿದ್ದೂ ಉಂಟು. ಆದರೆ ಈ ರಶೀದಿಯನ್ನು ಗಮನಿಸಿದರೆ ಕಟ್ಟಡಗಳೂ ಮಾಸ್ಕ್ ಧರಿಸಬೇಕೇನೋ ಹಾಗೂ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಕನಿಷ್ಟ ಅಂತರ ಇರಬೆಕೇನೋ ಎಂಬ ಚರ್ಚೆಯನ್ನು ಹುಟ್ಟುಹಾಕುವಂತಿದೆ.
ರಾಜ್ಯದ ಆಡಳಿತಾರೂಢ ಬಿಜೆಪಿಯ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲಷ್ಟೇ ಈ ನಿಯಮವೇ ಅಥವಾ ಈ ನಿಯಮ ರಾಜ್ಯದ ಬೇರೆಡೆಯೂ ಇದೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಜನರು ಮಾಸ್ಕ್ ಧರಿಸದಿರುವುದಕ್ಕೆ ಚರ್ಚ್ ಹಾಲ್‌ನ ಮುಖ್ಯಸ್ಥರಿಗೆ ದಂಡವಿಧಿಸಿರುವುದೇ? ಅಥವಾ ಕಟ್ಟಡವೇ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪಾಲಿಕೆಯ ಈ ರೀತಿಯ ಕ್ರಮವೇ ಎಂಬುದಕ್ಕೆ ಅಧಿಕಾರಿಗಲು ನೀಡುವ ಉತ್ತರ ‘ಅದು ಬರವಣಿಗೆಯಲ್ಲಾಗಿರುವ ಲೋಪ’.