ಮಂಗಳೂರು: ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಡಿದ್ದು, ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿದೆ. ಹಣಕಾಸು ಇಲಾಖೆಯ ತಿರಸ್ಕಾರದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ಅನುಮತಿ ಪಡೆದು ದುಪ್ಪಟ್ಟು ದರದಲ್ಲಿ ಖರೀದಿ ನಡೆಸಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ ನಡೆಸಿ ಮಾಡಿರುವ ಆರೋಪ ರಾಜಕೀಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ವಿಚಾರದಲ್ಲಿ ಕರಾವಳಿಯ ಬಿಜೆಪಿ ನಾಯಕರೂ ಯು.ಟಿ.ಖಾದರ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ವಕೀಲರೂ ಆದ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರೂ ಆದ ಮನೋರಾಜ್ ರಾಜೀವ್, ಬಿಜೆಪಿ ನಾಯಕರ ವೈಫಲ್ಯಗಳನ್ನು ಮುಂದಿಟ್ಟು ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಬಿಜೆಪಿ ನಾಯಕರು ಹಲವಾರು ರೀತಿ ಹಗರಣಗಳಲ್ಲಿ ಭಾಗಿಯಾಗಿದ್ದರು. ಅಂಥವರು ಕಾಂಗ್ರೆಸ್ ಸರ್ಕಾರವನ್ನೂ ಭ್ರಷ್ಟ ಎಂದು ಬಿಂಬಿಸುವ ಸಲುವಾಗಿ ನಾನಾ ರೀತಿ ನಾಟಕವಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಹಿಂದಿನ ಸರ್ಕಾರದಲ್ಲಿ ವೈಫಲ್ಯಗಳಿಗೆ ಹೆಸರಾದವರು ಬಿಜೆಪಿಯವರು. ಇದೀಗ ಪ್ರತಿಪಕ್ಷ ಸ್ಥಾನದಲ್ಲೂ ವಿಫಲರಾಗಿದ್ದಾರೆ. ಅಷ್ಟೇ ಅಲ್ಲ, ಯು.ಟಿ.ಖಾದರ್ ವಿರುದ್ಧ ಆರೋಪ ಮಾಡುವ ವಿಚಾರದಲ್ಲೂ ವಿಫಲರಾಗಿದ್ದಾರೆ ಎಂದು ಮನೋರಾಜ್ ರಾಜೀವ್ ತಿರುಗೇಟು ನೀಡಿದ್ದಾರೆ. ತಾವು ಸಮಾರ್ಹ ಸಂಸದೀಯ ಪಟುವೇ ಆಗಿದ್ದರೆ, ಸ್ಪೀಕರ್ ಅವರ ಮುಂದಾಳುತ್ವದಲ್ಲಿ ನಡೆದಿರುವ ಕಾರ್ಯಕ್ರಮಗಳನ್ನು ಮೂಕಪ್ರೇಕ್ಷಕರಾಗಿ ಗಮನಿಸಿ , ಕಾರ್ಯಕ್ರಮಗಳು ಪರಿಪೂರ್ಣವಾದಾಗ ಆರೋಪ ಹೊರಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ಕಾಗೇರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯವರು ಹೇಳುತ್ತಿರುವಂತೆ ಸ್ಪೀಕರ್ ಖಾದರ್ ಅವರು, ಶಾಸಕರ ನಿವಾಸಗಳನ್ನು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಮನೆಯ ಕಾಮಗಾರಿ ಆರಂಭವಾಗುವಾಗಲೇ ಬಿಜೆಪಿ ಶಾಸಕರಿಗೆ ಗೊತ್ತಾಗಿಲ್ಲವೇ? ಅಕ್ರಮ ನಡೆದಿದ್ದಲ್ಲಿ ಆ ಅಕ್ರಮದ ಸುಳಿವು ಆಗಲೇ ಸಿಗಬೇಕಿತ್ತಲ್ಲವೇ? ಭ್ರಷ್ಟಾಚಾರ ನಡೆದಿದ್ದಲ್ಲಿ ಆಗಲೇ ಅದನ್ನು ತಡೆಯಬಹುದಿತ್ತಲ್ಲವೇ? ಎಂದು ಮನೋರಾಜ್ ಪ್ರಶ್ನಿಸಿದ್ದಾರೆ. ಟೆಂಡರ್ ನಡೆಸದಂತೆ ತಡೆಯುವ ಅವಕಾಶ ಇತ್ತು, ಅದೂ ಆಗದಿದ್ದರೆ ಬಿಲ್ ಮಂಜೂರಾತಿಯನ್ನಾದರೂ ತಡೆಯಬಹುದಿತ್ತು. ಆದರೆ, ಆರೋಪಗಳು ಸುಳ್ಳಾಗಿರುವಾಗ ಅಂತಹಾ ನಡೆ ಅನುಸರಿಸಲು ಸಾಧ್ಯವಿಲ್ಲ ಎಂದು ಮನಗಂಡ ಬಿಜೆಪಿ ಶಾಸಕರು ಅನಗತ್ಯ ಆರೋಪ ಮಾಡಿ, ಈ ಸಂಬಂಧ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಎಂದು ಒತ್ತಾಯಿಸಿ ಸ್ಪೀಕರ್ ಅವರಿಗೆ ಅಗೌರವ ತೋರಿಸಿದ್ದಾರೆ ಎಂದು ಮನೋರಾಜ್ ದೂರಿದ್ದಾರೆ.
ಸ್ಪೀಕರ್ ಕಚೇರಿಯಿಂದಲೇ ಭ್ರಷ್ಟಾಚಾರ ನಡೆದಿದಲ್ಲಿ ಅಧಿವೇಶನದಲ್ಲಿ ಪ್ರಸ್ತಾಪಿಸುವ ಅವಕಾಶ ಈ ಬಿಜೆಪಿ ಶಾಸಕರಿಗೆ ಇತ್ತು, ನಿಲುವಳಿ ಸೂಚನೆಯನ್ನೂ ಮಂಡಿಸಬಹುದಿತ್ತು. ಆದರೆ ಸದನದಲ್ಲಿ ಮಾತೆತ್ತದ ಪ್ರತಿಪಕ್ಷ ಶಾಸಕರು, ಈಗ ಸ್ಪೀಕರ್ ವಿರುದ್ಧ ಅನಗತ್ಯ ಆರೋಪ ಮಾಡುತ್ತಾ ಹಕ್ಕುಚ್ಯುತಿಗೆ ಕಾರಣರಾಗಿದ್ದಾರೆ ಎಂದು ಮನೋರಾಜ್ ರಾಜೀವ್ ವಿಶ್ಲೇಷಿಸಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಶಾಸಕರು ಹಕ್ಕುಚುತಿಯ ದೂರನ್ನು ನೀಡಬೇಕೆಂದು ಕಾನೂನು ತಜ್ಞರೂ ಆಗಿರುವ ಮನೋರಾಜ್ ರಾಜೀವ್ ಸಲಹೆ ನೀಡಿದ್ದಾರೆ.
 
	    	



















































