ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ಗೆ 50% ರಷ್ಟು ಹಾಸಿಗೆ ಮೀಸಲಿಡುವ ವಿಚಾರದಲ್ಲಿ ಸಮಾಧಾನ ಆಗಿಲ್ಲ. ರಾಜ್ಯ ಸರ್ಕಾರದ ಆದೇಶವನ್ನು ಖಾಸಗಿ ಆಸ್ಪತ್ರೆಗಳು ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು.
ಸಚಿವರು ಸಕ್ರ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೋವಿಡ್ ಗೆ 50% ಹಾಸಿಗೆ ಮೀಸಲಿಡುವ ಆದೇಶ ಯಾರೆಲ್ಲ ಪಾಲಿಸಿದ್ದಾರೆ ಎಂದು ಪರಿಶೀಲಿಸಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯವರು ಶೇ.50 ಹಾಸಿಗೆ ನೀಡಿಲ್ಲ. ಹೀಗಾಗಿ ಆಸ್ಪತ್ರೆಯವರಿಗೆ ತೀಕ್ಷ್ಣವಾಗಿ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡುವ ವಿಚಾರದಲ್ಲಿ ನನಗೆ ಸಮಾಧಾನ ಆಗಿಲ್ಲ. ಕೆಲ ದೊಡ್ಡ ಆಸ್ಪತ್ರೆಗಳು ಕೂಡ ಹಾಸಿಗೆ ನೀಡಿಲ್ಲ. ಖಾಸಗಿ ಆಸ್ಪತ್ರೆಯವರು ಈ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂತಹ ಸ್ಥಿತಿ ನಿರ್ಮಿಸುವುದು ಬೇಡ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ, ಸಿಬ್ಬಂದಿ ಕೊರತೆ ಕೂಡ ಇರುತ್ತದೆ. ಈ ಎಲ್ಲ ಅಂಶಗಳನ್ನು ನೋಡಿಕೊಂಡು ಖಾಸಗಿ ಆಸ್ಪತ್ರೆಗಳೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲ ನ್ಯೂನತೆಗಳು ಬರಬಹುದು. ಆಮ್ಲಜನಕ, ರೆಮಿಡಿಸ್ವಿರ್ ಔಷಧ ಪೂರೈಕೆ, ಹಾಸಿಗೆ ಹೆಚ್ಚಳ, ಹೋಟೆಲ್ ಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಆಮ್ಲಜನಕ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ವಲಯವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈಗ ಇರುವ 800 ಮೆಟ್ರಿಕ್ ಟನ್ ಆಮ್ಲಜನಕ ಜೊತೆಗೆ 300 ಟನ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಗತ್ಯವಿರುವಷ್ಟು ಆಮ್ಲಜನಕ ನೀಡಲಾಗುವುದು ಎಂದು ಕೈಗಾರಿಕಾ ವಲಯದವರು ಕೂಡ ಹೇಳಿದ್ದಾರೆ ಎಂದರು.