ಮಂಗಳೂರು: ಕರಾವಳಿ ಮಲೆನಾಡಿನಲ್ಲಿ ಮಳೆ ಭೋರ್ಗರೆತ ಮುಂದುವರಿದಿದೆ. ಮುಂಗಾರು ಬಿರುಸುಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಏರುಪೇರಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.
ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಂಗಳೂರು ನಗರದ ಹಲವೆಡೆ ರಸ್ತೆಗಳಲ್ಲೇ ನೀರು ನಿಂತಿದ್ದರಿಂದ, ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ, ಮೂಡಬಿದ್ರಿ, ಪುತ್ತೂರು, ಬೆಳ್ತಂಗಡಿ, ಸುಳ್ಯ ಸಹಿತ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲೂ ವರ್ಷಧಾರೆ ಮುಂದುವರಿದಿದೆ. ಹೆಬ್ರಿ, ಕಾರ್ಕಳ ಸಹಿತ ಜಿಲ್ಲೆಯ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದರಿಂದ ಆ ಭಾಗದ ಜನರು ಪರದಾಡುವಂತಾಗಿದೆ. ಸಮುದ್ರದ ಅಲೆಗಳ ಅಬ್ವರವೂ ಜೋರಾಗಿದೆ. ಇದೇ ವೇಳೆ, ದಕ್ಷಿಣ ಕನ್ನಡ ಮಾದರಿಯಲ್ಲೇ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಿಸಲಾಗಿದೆ.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದ್ದು ಹಳ್ಳ ಕೊಳ್ಳಗಳು ತುಂಬಿವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ, ಕರಾವಳಿಯಲ್ಲಿ ಗುರುವಾರ ಅತಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.