ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಜೆ.ಆರ್. ಲೋಬೋ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಪಾದಯಾತ್ರೆಯ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಂಗಳೂರಿನ ನಗರ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು. ಮಂಗಳೂರ ಅನ್ನು ರಾಜ್ಯದ 2 ನೇ ನಗರವಾಗಿ ಅಭಿವೃದ್ಧಿ ಪಡಿಸೋಣ. ಮಂಗಳೂರಿನಲ್ಲಿ ಉದ್ಯೋಗದಾತ ಕಂಪನಿಗಳು ಬರಬೇಕು. ಸ್ಥಳೀಯವಾಗಿ ಉದ್ಯೋಗ ಹೆಚ್ಚಳ ಆಗಬೇಕು. ಜನತೆ ಸೌಹಾರ್ದತೆಯಿಂದ ಸಹೋದರ ಭಾವನೆಯಿಂದ ಬದುಕಬೇಕು ಎಂದರು.
ನಮ್ಮ ಸಂವಿಧಾನದ ಆಶಯಗಳಂತೆ ಜಾತಿ-ಮತ ಬೇಧವಿಲ್ಲದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡು, ಎಲ್ಲರನ್ನು ಪ್ರೀತಿಸಿ ಸಾಮರಸ್ಯದ ಬದುಕನ್ನು ಕಾಣಬೇಕು. ಅದೇ ನಮ್ಮ ಗುರಿ. ನಮ್ಮಲ್ಲಿ ಬಂಡವಾಳ ಹೂಡಿಕೆಯಾಗಿ, ಉದ್ಯೋಗ ಸೃಷ್ಟಿಯಾಗಿ ನಮ್ಮ ಯುವಕ, ಯುವತಿಯರಿಗೆ ಮಂಗಳೂರಿನಲ್ಲೇ ಉದ್ಯೋಗ ದೊರಕುವ ವಾತಾವರಣ ನಿರ್ಮಾಣವಾಗಬೇಕು. ಯಾವುದೇ ಜಾತಿ- ಮತ- ಧರ್ಮದ ಬೇಧವಿಲ್ಲದೆ ಉತ್ತಮ ಬಾಳ್ವೆ ಮಾಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಮಾಜಿ ಕಾರ್ಪೊರೇಟರ್ ನವಾಝ್, ಪಕ್ಷದ ಮುಖಂಡರಾದ ಟಿ.ಕೆ.ಸುಧೀರ್, ಹರೀಶ್ ಸಹಿತ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






























































