ಮಂಗಳೂರು: ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇನಾಯತ್ ಅಲಿ ಅವರು ಗುರುವಾರ ಬೆಳಿಗ್ಗೆ ಕಾವೂರು ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಸಿ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಹಸ್ರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ಬಳಿಕ ಮಿನಿವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ ಹರಿವ ನೀರು. ಹೀಗಾಗಿ ಇನಾಯತ್ ಅಲಿ ಎನ್ನುವ ಯುವ ನಾಯಕನಿಗೆ ಪಕ್ಷ ಟಿಕೆಟ್ ನೀಡಿದೆ. ಓರ್ವ ಸಮರ್ಥ ಅಭ್ಯರ್ಥಿ ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅವರು ಮಾತನಾಡಿ, ಮಾಜಿ ಶಾಸಕ ಮೊಯಿದ್ದೀನ್ ಬಾವಾ ದುಡುಕಿನ ನಿರ್ಧಾರ ಕೈಗೊಳ್ಳದೆ ನಮ್ಮೊಂದಿಗೆ ಬರಬೇಕು. ನಾವೆಲ್ಲರೂ ಅವರೆಲ್ಲರ ಜೊತೆಗಿದ್ದೇವೆ. ಅವರು ವೈಮನಸ್ಸು ಏನೇ ಇದ್ದರೂ ಪಕ್ಷಕ್ಕಾಗಿ ದುಡಿಯಬೇಕು. ಇನಾಯತ್ ಅಲಿ ಅವರು ಯೋಗ್ಯ ಅಭ್ಯರ್ಥಿ ಎಂದು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ ಎಂದರು.
ಅಭ್ಯರ್ಥಿ ಇನಾಯತ್ ಅಲಿ ಅವರು ಮಾತನಾಡಿ, ಪಕ್ಷ ನನ್ನ ಸೇವೆ ಗುರುತಿಸಿ ಟಿಕೆಟ್ ನೀಡಿದೆ. ನನ್ನನ್ನು ಎಲ್ಲ ಸಮುದಾಯದ ಜನರು ಪ್ರೀತಿಯಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಮಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರು, ಮುಖಂಡರಲ್ಲಿ ಏನೇ ವೈಮನಸ್ಸು ಇದ್ದರೂ ಅದನ್ನು ಮರೆತು ಎಲ್ಲರೂ ಒಂದಾಗಿ ಗೆಲುವಿಗೆ ಶ್ರಮಿಸಿ ಎಂದರು.
ಮಿಥುನ್ ರೈ, ಮಾಜಿ ಮೇಯರ್ ಕವಿತಾ ಸನಿಲ್, ಸುಧೀರ್ ಕುಮಾರ್ ಮುರಳಿ, ಗಿರೀಶ್ ಆಳ್ವ, ಶಾಹುಲ್ ಹಮೀದ್, ನೀರೇಶ್ ಪಾಲ್, ಉಮೇಶ್ ದಂಡೆಕೇರಿ, ಕೆ. ಅಭಯಚಂದ್ರ ಜೈನ್, ಯು. ಪಿ ಇಬ್ರಾಹಿಂ, ಶಶಿಕಲಾ ಪದ್ಮನಾಭ, ಜೇಸನ್ ಸುರತ್ಕಲ್, ಸುರೇಂದ್ರ ಕಂಬಳಿ, ಮುಫಿದಾ, ಚಂದ್ರಹಾಸ್ ಪೂಜಾರಿ, ಶ್ರೀನಿವಾಸ್ ಸಾಲಿಯಾನ್, ಆನಂದ ಅಮೀನ್, ನೀರಜ್ ಪಾಲ್, ಮಂಗಳೂರು ಉತ್ತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಉಪಸ್ಥಿತರಿದ್ದರು.

























































