ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗೆ ಮನವಿ
ಮಂಗಳೂರು: ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ಪತ್ರಕರ್ತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ಸಂಬಳ, ಗೌರವಧನ ಇಲ್ಲದಾಗಿದೆ.ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವರಿಗೆ ಜೀವನ ಸಾಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇತ್ತೀಚಿಗೆ ಸರಕಾರ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ ಕೇವಲ ಕೋವಿಡ್ ಲಸಿಕೆಯನ್ನು ಮಾತ್ರ ನೀಡುತ್ತಿದೆ. ಪತ್ರಕರ್ತರಿಗೆ ಇತರ ಯಾವುದೇ ಸೌಲಭ್ಯ ಸರಕಾರದಿಂದ ದೊರೆಯುತ್ತಿಲ್ಲ. ಆದುದರಿಂದ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ತಮಗೆ ಸಮಸ್ತ ಪತ್ರಕರ್ತರ ಪರವಾಗಿ ಮನವಿ ಸಲ್ಲಿಸುವುದಾಗಿ ಶ್ರೀನಿವಾಸ ನಾಯಕ್ ಇಂದಾಜೆ ವಿನಂತಿಸಿದ್ದಾರೆ.