ಬೆಂಗಳೂರು: ಮಂಗಳೂರಿನಲ್ಲಿ ಶನಿವಾರ ಆಟೋರಿಕ್ಷಾದಲ್ಲಿ ಸಂಭವಿಸಿರುವ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಭಯೋತ್ಪಾದನಾ ಕೃತ್ಯದ ಶಂಕೆ ಇದೆ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಆರೋಪಿಯ ಬಂಧನದ ಸಂಗತಿ ಬೆಳಕಿಗೆ ಬಂದಿದೆ.
‘ಮಂಗಳೂರಿನಲ್ಲಿ ನಡೆದಿರುವುದು ಆಕಸ್ಮಿಕ ಘಟನೆಯಲ್ಲ, ಅದೊಂದು ಭಯೋತ್ಪಾದನಾ ಕೃತ್ಯ’ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷ ಕೂಡಾ ತನ್ನ ಅಧಿಕೃತ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದೆ.
ಮಂಗಳೂರಿನಲ್ಲಿ ಆಟೋ ರಿಕ್ಷಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡಿದೆ.
ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿದ್ದು, ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ಶೀಘ್ರದಲ್ಲಿ ಬೇಧಿಸಲಿವೆ.
— BJP Karnataka (@BJP4Karnataka) November 20, 2022
ಮಂಗಳೂರಿನ ನಾಗುರಿ ಬಳಿ ಶನಿವಾರ ಸಂಜೆ ಆಟೋ ರಿಕ್ಷಾ ಸ್ಫೋಟಗೊಂಡು ಚಾಲಕ ಮತ್ತು ಇನ್ನೊಬ್ಬ ಗಾಯಗೊಂಡಿದ್ದರು. ಚಲಿಸುತ್ತಿದ್ದ ಆಟೋ ರಿಕ್ಷಾ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ಜನ ಬೆಚ್ಚಿಬಿದ್ದಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡ ಪೊಲೀಸರು ಈ ಘಟನೆಯು ನಿಗೂಢ ಕೃತ್ಯವಾಗಿರಬಹುದೆಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ.. ಮಂಗಳೂರು ಬ್ಲಾಸ್ಟ್ ಹಿಂದೆ ಉಗ್ರರ ಕೃತ್ಯದ ಶಂಕೆಯಿದೆ ಎಂದ ಅರಗ ಜ್ಞಾನೇಂದ್ರ
ಈ ನಡುವೆ, ಮಂಗಳೂರು ಸ್ಫೋಟ ಪ್ರಕರಣ ಬಗ್ಗೆ ಎನ್‌ಐಎ ಕೂಡಾ ಮಾಹಿತಿ ಸಂಗ್ರಹಿಸುತ್ತಿದೆ. ಈ ಘಟನೆ ನಂತರ ಮಂಗಳೂರು ನಗರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
























































