ಬೆಂಗಳೂರು: ವಿಶ್ವವಂದ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಭಾರತವನ್ನು ಜಗದ್ವಂದ್ಯ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ವಿವಿಧ ಪ್ರಕೋಷ್ಠಗಳ ಚಿಂತನ ವರ್ಗವನ್ನು ಉದ್ಘಾಟಿಸಿದ ಅವರು, ಕಾಂಗ್ರೆಸ್ ಪಕ್ಷವು ಸುಮಾರು 7 ದಶಕಗಳ ಕಾಲ ಆಡಳಿತ ನಡೆಸಿದ್ದು ಭ್ರಷ್ಟಾಚಾರ, ಹಗರಣಗಳನ್ನೇ ತನ್ನ ಮೂಲ ಮಂತ್ರವನ್ನಾಗಿ ಮಾಡಿಕೊಂಡಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರವು “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಪರಿಕಲ್ಪನೆಯೊಂದಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ವಿವಿಧ ಪ್ರಕೋಷ್ಠಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ನಮ್ಮ ಸರ್ಕಾರಗಳ ವಿವಿಧ ಜನಪರ ಯೋಜನೆಗಳು ಸರಿಯಾದ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಂತ್ಯೋದಯದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಭಾನುಪ್ರಕಾಶ್, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕರಾದ ಶಿವಯೋಗಿಸ್ವಾಮಿ, ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.