ಉಡುಪಿ: ದೇವಳ ನಗರಿಯಲ್ಲಿ ರಸ್ತೆ ಅಭಿವೃದ್ದಿ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆ ವರೆಗಿನ ರಸ್ತೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವ ಕಾಮಗಾರಿಯ ರೂಪುರೇಷೆಗಳು ಕೊನೆಯ ಹಂತದಲ್ಲಿದ್ದು, ಈ ರಸ್ತೆಯು ಆದಿ ಉಡುಪಿಯಿಂದ ಮಲ್ಪೆ ಬಂದರಿನ ಗೇಟ್ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.
ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯಲ್ಲಿ ಮೈಲುಗಲ್ಲುಗಳನ್ನು ಹಾಕಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕೆ ದೂರವಾದ ಸುಳ್ಳುಗಳು ಹರಿದಾಡುತ್ತಿರುವುದರಿಂದ ಸ್ಪಷ್ಟೀಕರಣವನ್ನೂ ಅವರು ನೀಡಿದ್ದಾರೆ.
ಆದಿ ಉಡುಪಿಯಿಂದ ಮಲ್ಪೆ ವರೆಗಿನ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಈಗಾಗಲೆ ರೂ. 65. 00 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಲು ಪ್ರತ್ಯೇಕವಾಗಿ ರೂ. 12. 00 ಕೋಟಿ ಮೀಸಲಿರಿಸಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ ಎಂದವರು ತಿಳಿಸಿದ್ದಾರೆ.
ಎಲ್ಲಾ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಿ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದಿರವ ಅವರುು, ಆದಿ ಉಡುಪಿಯಿಂದ ಮಲ್ಪೆ ಬಂದರಿನ ಗೇಟ್ ವರೆಗೆ ರಸ್ತೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.