ಬೆಂಗಳೂರು: ಕೋವಿಡ್ ಸೋಂಕಿಗೆ ಬಲಿಯಾದ ಪಾರಾಣೆಯ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ಮಾಧ್ಯಮ ಸ್ಪಂದನ ತಂಡದ ನೇತೃತ್ವದಲ್ಲಿ ನಡೆಯಿತು.
ಕೋವಿಡ್ ಸೋಂಕಿಗೆ ಒಳಗಾಗಿ ಗೃಹ ಸಂಪರ್ಕ ತಡೆಯಲ್ಲಿದ್ದ 85 ವರ್ಷದ ಅಜ್ಜ ಭಾನುವಾರ ನಿಧನರಾದರು. ಕೋವಿಡ್ ಭಯದಿಂದ ಊರಿನವರು, ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಲು ಹೆದರಿಕೊಂಡಿದ್ದರು. ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಕೂಡ ಸೋಂಕಿತರಾಗಿರುವುದು ಭಯಕ್ಕೆ ಕಾರಣವಾಗಿತ್ತು.
ಅಂತ್ಯಕ್ರಿಯೆಗೆ ಸಹಕಾರ ನೀಡುವಂತೆ ಮಾಧ್ಯಮ ಸ್ಪಂದನ ತಂಡದ ಪುತ್ತರಿರ ಪಪ್ಪು ತಿಮ್ಮಯ್ಯ ಅವರನ್ನು ಕೋರಲಾಗಿತ್ತು.
ಮಾಧ್ಯಮ ಸ್ಪಂದನ ತಂಡದ ಪುತ್ತರಿರ ಪಪ್ಪು ತಿಮ್ಮಯ್ಯ, ರೆಜಿತ್ ಕುಮಾರ್ ಗುಹ್ಯ, ಪುಟಾಣಿ (ಪ್ರವೀಣ್), ಅನೀಶ್, ಶರೀನ್ ಅವರು ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಸ್ಮಶಾನದವರೆಗೂ ಪಾರ್ಥಿವ ಶರೀರ ಹೊತ್ತು ಸಾಗಿ, ಅಂತ್ಯಕ್ರಿಯೆ ನೆರವೇರಿಸಿದರು. ಮಾಧ್ಯಮ ಸ್ಪಂದನ ತಂಡದ ಕಾರ್ಯಕ್ಕೆ ಮೃತರ ಸಂಬಂಧಿಕರು ಮೆಚ್ಚುಗೆ ವ್ಯಕ್ತ ಪಡಿಸಿದರು.