ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಅಸ್ತಿ-ಪಾಸ್ತಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ. ಲೋಕೋಪಯೋಗಿ ಇಲಾಖೆ, ಬೆಸ್ಕಾಂ, ಕೆಆರ್ಐಡಿಎಲ್, ಪಿಡಿಓ ಅಧಿಕಾರಿಗಳು, ಟೌನ್ ಪ್ಲ್ಯಾನಿಂಗ್ ಅಧಿಕಾರಿಗಳ ಅಕ್ರಮ ಆಸ್ತಿ ಪತ್ತೆಗಾಗಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
-
ಕೆಲ ದಿನಗಳ ಹಿಂದೆ ನಾಗರಾಜ್ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಎಂ.ಎಲ್. ನಾಗರಾಜ್ ಅವರ ಬೆಂಗಳೂರು ಮತ್ತು ಬಳ್ಳಾರಿಯ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
-
ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ್ ಬಾಬು ಅವರ ಚಿತ್ರದುರ್ಗ ಮತ್ತು ಬೆಂಗಳೂರು ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
-
ಕೆಆರ್ಐಡಿಎಲ್ನ ಎಇಇ ಸೈಯದ್ ಮುನೀರ್ ಅಹ್ಮದ್ನ್ ಎಂಬವರ ಬೆಂಗಳೂರಿನ ಆರ್.ಟಿ.ನಗರ ನಿವಾಸ ಮೇಲೆ ಲೋಕಾಯುಕ್ತ ಅಧಿಕಾರಿಗಳು ಲಗ್ಗೆ ಹಾಕಿ ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ, ವಿದೇಶಿ ಕರೆನ್ಸಿ, ಚಿನ್ನ, ಬೆಳ್ಳಿ ಆಭರಣ, ವಾಚ್ಗಳು, ಮೊಬೈಲ್ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
-
ಬೆಂಗಳೂರು ಹೊರವಲಯದ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಕಳೆದ 1 ಗಂಟೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ.
-
ರಾಮನಗರ ಜಿಲ್ಲೆ ಸಾಸಲುಪುರ ಗ್ರಾಮದಲ್ಲಿರುವ ಟೌನ್ ಅಂಡ್ ರೂರಲ್ ಪ್ಲ್ಯಾನಿಂಗ್ ಜಂಟಿ ನಿರ್ದೇಶಕ ಮಂಜೇಶ್ ಅವರ ಫಾರ್ಮ್ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
-
ನೆಲಮಂಗಲದ ಕುಂದಾಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮನೆ ಮೇಲೆ, ದಾಬಸ್ ಪೇಟೆ ಹಾಗೂ ತುಮಕೂರಿನಹಲವೆಡೆ ಪರಿಶೀಲನೆ ನಡೆದಿದೆ.