ಚಿಕ್ಕಬಳ್ಳಾಪುರ : ಮುಂದಿನ ಒಂದು ತಿಂಗಳ ಅವಧಿಗೆ ಕೋವಿಡ್ ಹಿನ್ನೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದೆ. ಈ ವರದಿಯನ್ನಾಧರಿಸಿ ಲಾಕ್‌ಡೌನ್ ಮುಂದುವರಿಸುವ ಅಥವಾ ಅನ್‌ಲಾಕ್ ಪ್ರಕ್ರಿಯೆ ಆರಂಭಿಸುವ ನಿರ್ಧಾರವನ್ನು ಸರ್ಕಾರ ನಾಳೆ ಪ್ರಕಟಿಸಲಿದೆ.
ತಾಂತ್ರಿಕ ಸಲಹಾ ಸಮಿತಿ ವರದಿ ಕುರಿತಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ನಿವಾಸಿಗಳಿಗೆ ಸದ್ಗುರು ಜಗ್ಗಿವಾಸುದೇವ್ ಅವರ ಇಶಾ ಫೌಂಡೇಶನ್‌ವತಿಯಿಂದ ನೀಡಿರುವ ಆಹಾರ ಧಾನ್ಯಗಳ ಕಿಟ್ ವಿತರಿಸಿ ಸೋಮವಾರ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಅಂಶಗಳ ತಳಹದಿಯ ಮೇಲೆ ಅಧ್ಯಯನ ನಡೆಸಿರುವ ಸಮಿತಿಯು ಮುಂದಿನ ಹದಿನೈದರಿಂದ ಒಂದು ತಿಂಗಳ ಅವಧಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ಜು ವರದಿಯಲ್ಲಿ ತಿಳಿಸಿದೆ. ಅದನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದೇವೆ. ಸಚಿವ ಸಂಪುಟದ ಹಿರಿಯ ಸದಸ್ಯರ ಜತೆ ನಡೆಯುವ ಸಭೆಯಲ್ಲಿ ಸಿಎಂ ಅವರು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ತಜ್ಞರು ನೀಡುವ ಸಲಹೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ತಿಳಿಸಿದರು.
ಲಾಕ್‌ಡೌನ್‌ನಿಂದ ಸೋಂಕಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಿದೆ. ಶೇಕಡಾ ನಲವತ್ತೈದರಿಂದ ಐವತ್ತರಿಷ್ಟಿದ್ದ ಸೋಂಕಿನ ಪ್ರಮಾಣ ಲಾಕ್‌ಡೌನ್ ಬಳಿಕ ಶೇಕಡಾ ಹದಿನೈದರಿಂದ ಹದಿನೇಳಕ್ಕೆ ಇಳಿದಿದೆ. ಮೈಸೂರು ಸಹಿತ ಕೆಲ ಜಿಲ್ಲೆಗಳಲ್ಲಿ ಮಾತ್ರ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಿದೆ. ಇದು ಇನ್ನೂ ಕಡಿಮೆ ಆಗಬೇಕು. ಕಡಿಮೆ ಆಗಿದೆ ಎಂದಾಕ್ಷಣ ಎರಡನೇ ಅಲೆ ಮುಕ್ತಾಯವಾಗಿದೆ ಎಂದು ಭಾವಿಸುವಂತಿಲ್ಲ. ಕೋವಿಡ್ ಮುನ್ನೇಚ್ಚರಿಕೆ ಕ್ರಮಗಳನ್ನು ಜನರು ಎಚ್ಚರಿಕೆಯಿಂದ ಅನುಸರಿಸಬೇಕು. ಎಚ್ಚರತಪ್ಪಿದರೆ ಎರಡನೇ ಅಲೆ ಮುಂದುವರಿಯುತ್ತದೆ ಎಂದೂ ಅವರು ಕಿವಿ ಮಾತು ಹೇಳಿದರು.