ಬೆಂಗಳೂರು: ವಿಧಾನಸಭಾ ಉಪ ಚುನಾವಣೆ ಬೆನ್ನಲ್ಲೇ ರಾಜ್ಯ ನಾಯಕತ್ವ ಬದಲಾವಣೆ ನಿಶ್ಚಿತ ಎಂಬ ಮಾತುಗಳು ಆಡಳಿತಾರೂಢ ಬಿಜೆಪಿಯಲ್ಲಿ ಪ್ರತಿಧ್ವನಿಸುತ್ತಲಿತ್ತು. ಇದೀಗ ಜಿಂದಾಲ್‌ಗೆ ಜಮೀನು ನೀಡಿರುವ ನಿರ್ಧಾರದ ವಿರುದ್ದ ಬಿಜೆಪಿ ಶಾಸಕರನೇಕರು ಸಿಡಿದೆದ್ದಿದ್ದು ಹೈಕಮಾಂಡ್ ಮಟ್ಟದಲ್ಲಿ ಸದ್ದೆಬ್ಬಿಸಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ದ ಸರಣಿ ದೂರುಗಳು ಬಿಜೆಪಿ ಹೈಕಮಾಂಡ್ ಬಳಿ ತಲುಪಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆ ಸಾಗಿದೆ.
ಆದರೆ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಯಡಿಯೂರಪ್ಪ ಅವರ ಸಾಧನೆಗಳನ್ನು ಹೈಕಮಾಂಡ್ ಮೆಚ್ಚಿದೆ ಎಂದು ಹೇಳುವ ಮೂಲಕ ಅವರು ಬಿಎಸ್‌ವೈ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಈ ಬೆಳವಣಿಗೆಗಳ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಮುರುಗೇಶ್ ನಿರಾಣಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ. ಇನ್ನೂ ಎರಡು ವರ್ಷ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ಸಿಎಂ ಎಂದರು. ರಾಜ್ಯದಲ್ಲಿ ಯಡಿಯೂರಪ್ಪನವರ ಆಡಳಿತ ಉತ್ತಮವಾಗಿದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಅಷ್ಟೇ. ಮುಂದಿನ ಚುನಾವಣೆ ಕೂಡಾ ಯಡಿಯೂರಪ್ಪನವರ ನೇತೃತ್ವದಲ್ಲೇ ನಡೆಯಲಿದೆ ಎಂದರು.
ಕೋವಿಡ್ ಪರಿಸ್ಥಿತಿಯನ್ನ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಎಲ್ಲ ಸಚಿವರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮಂತ್ರಿ ನಿರಾಣಿಯವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.