ನರ್ಸಿಂಗ್ ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅನುಮತಿ.. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ.. ಮೈಸೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿಕೆ..
ಮೈಸೂರು: ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ನಿವಾರಣೆ ಮಾಡುವ ಸದುದ್ದೇಶದಿಂದ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಜನರೇಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ
ಮುರುಗೇಶ್ ನಿರಾಣಿ ತಿಳಿಸಿದ್ದಾರೆ
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದಲ್ಲಿ ಆಕ್ಸಿಜನ್ ಜನರೇಟರ್ ಸ್ಥಾಪಿಸಿದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊಸ ನರ್ಸಿಂಗ್ ಕಾಲೇಜು ಬೇಡ ಅನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಈಗ ನರ್ಸ್‌ಗಳ ಕೊರತೆ ಉಂಟಾಗಿದೆ. ನರ್ಸಿಂಗ್ ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅನುಮತಿ ನೀಡಲಾಗುವುದು ಎಂದು ಪ್ರಕಟಿಸಿದರು.
ಆಕ್ಸಿಜನ್ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಇದೆ. ಅದನ್ನು ಶೇಖರಣೆ ಮಾಡಲು ಕಂಟೇನರ್ ಗಳ ಕೊರತೆಯಿದೆ. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಕೇಂದ್ರದಿಂದಲೂ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಸಿಲಿಂಡರ್‍ಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ ಎಂದರು.
ಕೋವಿಡ್‌ನಲ್ಲಿ ಕೆಲಸ ಮಾಡುವವರಿಗೆ ಗ್ರೇಸ್ ಮಾರ್ಕ್ ನೀಡಲಾಗುವುದು. ಇದರಿಂದಾಗಿ ಬೇರೆಯವರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು ಆಕ್ಸಿಜನ್ ಬೇಡಿಕೆ ಕಡಿಮೆ ಆಗಿದೆ. ಕೊರೊನಾ ಸವಾಲನ್ನು ಜಿಲ್ಲಾಡಳಿತಗಳು ಮತ್ತು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದು ಸಚಿವ ನಿರಾಣಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಾಕ್ ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕು ಅಲ್ಲ. ಔಷಧಿ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಆದರೂ ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸಾವ೯ಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ನಿರಾಣಿ ಮನವಿ ಮಾಡಿದರು.
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಎಲ್ಲ ಸಿದ್ದತೆ ಆಗಿದೆ. ದ್ವಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ರೈತರು ಮತ್ತು ಸ್ಥಳೀಯರು ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ಇಲ್ಲ. ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸಗ ಇಲಾಖೆಗೆ ಸೂಚನೆ ನೀಡಿದ್ದೇನೆ. ಮರಳು ಮಾಫಿಯ ತಡೆಯಲು ಶೀಘ್ರದಲ್ಲೇ ಕಠಿಣವಾದ ಮರಳುನೀತಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.