ಬೆಂಗಳೂರು: ನಿತ್ಯವೂ ಒಂದಿಲ್ಲೊಂದು ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ವಿಜಯದಶಮಿ ದಿನವಾದ ಇಂದು ಕೂಡಾ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾದವು.
ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಜಿಲ್ಲೆಯ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಅವರ ಸಹೋದರ ಮಧು ಬಂಗಾರಪ್ಪ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಬಂಗಾರಪ್ಪನವರ ಪುತ್ರರು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿದೆ.
ಸ್ವಲ್ಪ ಹೊತ್ತಿನಲ್ಲೇ ಹೊರಟ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಳಿಕ ನಿರ್ಗಮಿಸಿದ ಕುಮಾರ್ ಬಂಗಾರಪ್ಪ, ತನ್ನ ಪುತ್ರಿಯ ಮದುವೆ ನವೆಂಬರ್ 10ಕ್ಕೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆಮಂತ್ರಣ ಕೊಡಲು ಬಂದಿದ್ದೆ ಎಂದರು.
ತಾವು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ. ಕಾಂಗ್ರೆಸ್ ಸೇರ್ತಾರೆ ಅನ್ನೋದು ಸುಳ್ಳು ಸುದ್ದಿ ಎಂದ ಅವರು,ಒ ನನ್ನನ್ನು ಯಾವ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ, ನಾನು ಕಾಂಗ್ರೆಸ್ ಸೇರಲ್ಲ. ನಾನು ಬಿಜೆಪಿಯಲ್ಲಿ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಈ ನಡುವೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅನುಕಂಪದ ಮಾತುಗಳನ್ನಾಡಿ ಅಚ್ಚರಿಗೆ ಕಾರಣರಾದರು. ಡಿಕೆಶಿ ಭ್ರಷ್ಟಾಚಾರ ಮಾಡಿದ್ದಾರೋ, ಇಲ್ವೋ, ಗೊತ್ತಿಲ್ಲ. ಆದರೆ ಕಾಂಗ್ರೆಸ್ ಮುಖಂಡರೇ ಹಾಗೇ ಮಾತನಾಡಬಾರದಿತ್ತು ಎಂದು ಕುಮಾರ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.