ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಸರ್ಕಾರ ಹರಸಾಹಸಪಡುತ್ತಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆ, ಜನಸಾಮಾನ್ಯರ ಹಿಡಿಶಾಪ, ಪ್ರತಿಪಕ್ಷಗಳ ವಾಗ್ದಾಳಿಗಳಂತಹಾ ಸರಣಿ ಸವಾಲುಗಳಿಂದಾಗಿ ಸರ್ಕಾರ ತೀವ್ರ ಮುಜುಗರ ಪಡುವಂತಾಗಿದೆ. ಬಿಎಂಟಿಸಿ ಸಹಿತ ನಿಗಮಗಳು ನೌಕರರ ವಜಾ ಹಾಗೂ ಎತ್ತಂಗಡಿಯ ಕ್ರಮಗಳಿಗೆ ಮುನ್ನುಡಿ ಬರೆದಿದ್ದರೆ ಇನ್ನೊಂದೆಡೆ ರಾಜ್ಯ ಸರ್ಕಾರವು ಮುಷ್ಕರವನ್ನೇ ನಿಷೇಧಿಸಿ ಆದೇಶಿಸಿದೆ. ಕೈಗಾರಿಕಾ ವಿವಾದ ಕಾಯ್ದೆಯಡಿ ಮುಷ್ಕರವನ್ನೇ ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಕೈಗಾರಿಕಾ ವಿವಾದ ಕಾಯ್ದೆ-1947 ಕಲಂ 10 (3)’ ಅಡಿ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶದಿಂದಾಗಿ ಸಾರಿಗೆ ಸಂಸ್ಥೆ ನೌಕರರು ಸರ್ಕಾರದ ಬಿಗಿ ಮುಷ್ಟಿಯಲ್ಲಿ ಸಿಲುಕಿದ್ದು, ಈ ನಿಷೇಧದ ನಿಯಮಗಳನ್ನೇ ಆಧರಿಸಿ ಮುಷ್ಕರ ನಿರತರ ವಿರುದ್ಧ ‘ಎಸ್ಮಾ’ ಜಾರಿಗೆ ಅವಕಾಶ ಸಿಕ್ಕಿದೆ.
ಸಾರಿಗೆ ನಿಗಮಗಳು ಮತ್ತು ನೌಕರರ ಕೂಟದ ನಡುವಿನ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಕಾರ್ಮಿಕರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಇಂತಹಾ ನಡೆ ಅನುಸರಿಸಿದವರ ವಿರುದ್ದ ಎಸ್ಮಾ ಜಾರಿಗೆ ಅವಕಾಶ ಸಿಕ್ಕಿದಂತಾಗಿದ್ದು, ಮುಷ್ಜರ ನಿರತ ಸಾರಿಗೆ ಸಿಬ್ಬಂದಿ ಸ್ಥಿತಿ ಇಕ್ಕಟ್ಟಿನಲ್ಲಿ ಸಿಲುಕಿದೆ.