ಬೆಂಗಳೂರು: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರಿದಿದೆ. ಆದರೆ ಅಷ್ಟರಲ್ಲೇ ವಜಾ ಅಸ್ತ್ರವನ್ನು ಸರ್ಕಾರ ಪ್ರಯೋಗಿಸಿ ನೌಕರರಿಗೆ ಶಾಕ್ ಟ್ರೀಟ್‌ಮೆಂಟ್ ನೀಡಿದೆ.
ಗುರುವಾರ ಕೆಲಸಕ್ಕೆ ಹಾಜರಾಗದ, ತರಬೇತಿಯಲ್ಲಿರುವ 96 ನೌಕರರನ್ನು ವಜಾಮಾಡುವ ನಿರ್ಧಾರ ಕೈಗೊಂಡಿದೆ. ಪ್ರೊಬೆಷನರಿ ಅವಧಿಯಲ್ಲಿ ಇರುವವರಿಗೆ ಕರ್ತವ್ಯಕ್ಕೆ ಹಾಜರಾಗಲು ಶುಕ್ರವಾರದ ಗಡುವು ವಿಧಿಸಿತ್ತು. ಆದರೆ ಯಾವುದಕ್ಕೂ ನೌಕರರು ಬಗ್ಗದಿದ್ದಾಗ ವಜಾ ಅಸ್ತ್ರ ಪ್ರಯೋಗಿಸಲಾಗಿದೆ ಎನ್ನಲಾಗಿದೆ.
ಬಿಎಂಟಿಸಿಯಲ್ಲಿ ಹೆಚ್ಚು ಗೈರುಹಾಜರಿ ಮತ್ತು ಅಸಮರ್ಪಕ ಸೇವೆಯ ಕಾರಣ ನೀಡಿ 96 ಮಂದಿ ವಿರುದ್ದ ಈ ಕ್ರಮಜರುಗಿಸಲಾಗಿದೆ ಎನ್ನಲಾಗುತ್ತಿದೆ.
ಈ ನಡುವೆ, ನಿವೃತ್ತ ನೌಕರರನ್ನು ಒಪ್ಪಙದ ಆಧಾರದಲ್ಲಿ ಬಳಸಿಕೊಳ್ಳಲು ಸಾರಿಗೆ ಸಂಸ್ಥೆ ಮುಂದಾಗಿದೆ.