ಬೆಂಗಳೂರು: ರಾಜ್ಯ ಸರ್ಜಾರದ ಗ್ಯಾರೆಂಟಿ ಯೋಜನೆಗಳಲ್ಲೊಂದಾಗಿರುವ ‘ಶಕ್ತಿ’ ಇದೀಗ ಕೆಎಸ್ಸಾರ್ಟಿಸಿಯ ಯಶೋಗಾಥೆಗೆ ಮುನ್ನುಡಿ ಬರೆದಿದೆ. ಉಚಿತ ಪ್ರಯಾಣ ಸೌಲಭ್ಯ ಆರಂಭವಾದ ಮೊದಲ ತಿಂಗಳಲ್ಲೇ ಬರೋಬ್ವರಿ 16.73 ಕೋಟಿ ಮಹಿಳೆಯರು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಯೋಜನೆಯ ಪ್ರಯೋಜನ ಪಡೆದಿದ್ದು ಸಾರಿಗೆ ನಿಗಮಕ್ಕೂ ‘ಶಕ್ತಿ’ ತುಂಬಿದ್ದಾರೆ.
ರಾಜ್ಯ ಸರ್ಕಾರದಿಂದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯನ್ನು ಜೂನ್.11ರಂದು ಜಾರಿಗೊಳಿಸಿತ್ತು. ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇಂದಿಗೆ ಒಂದು ತಿಂಗಳು ಕಳೆದಿದ್ದು, ಬರೋಬ್ಬರಿ 16.73 ಕೋಟಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಮೂಲಕ ಜೀವ ತುಂಬಿದ್ದಾರೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ, ದಿನಾಂಕ 11.06.2023 ರಂದು ಚಾಲನೆಗೊಂಡ ಕರ್ನಾಟಕ ಸರ್ಕಾರದ
ಮಹತ್ವಾಕಾಂಕ್ಷೆಯ ಯೋಜನೆಯಾದ “ಶಕ್ತಿ” ಯೋಜನೆಯು ಇಂದಿಗೆ ಒಂದು ತಿಂಗಳು ಪೂರೈಸಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿ, ಮಹಿಳಾ ಪ್ರಯಾಣಿಕರಿಂದ ಅಭೂತಪೂರ್ವ ಯಶಸ್ಸನ್ನು ಗಳಿಸಿದೆ ಎಂದಿದ್ದಾರೆ.
ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ನಾಲ್ಕು ಸಾರಿಗೆ ಸಂಸ್ಥೆಗಳ ಎಲ್ಲಾ ಅಧಿಕಾರಿ/ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಯಾಣಿಕರು, ಅದರಲ್ಲಿಯೂ ಮಹಿಳಾ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ ಪ್ರಯಾಣಿಸಿ ‘ಸಾರಿಗೆ ಬಸ್ಸುಗಳು ಜನರ ಜೀವನಾಡಿಯೂ ಹೌದು ಹಾಗೂ ಮಹಿಳೆಯರ ಪಯಣದ ಸಾರಥಿಯೂ ಹೌದು” ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದವರು ಹೇಳಿದ್ದಾರೆ.
ಈ ಒಂದು ತಿಂಗಳ ಅವಧಿಯಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ ದಿನ :
-
ದಿನಾಂಕ 04.07.2023 ರಂದು ಒಟ್ಟು 1,20,04,725 ಪ್ರಯಾಣಿಕರು ಸಂಚರಿಸಿದ್ದು, ಈ ಪೈಕಿ ದಾಖಲೆ ಪ್ರಮಾಣದಲ್ಲಿ ಅಂದರೆ 70,15,397 ಮಹಿಳಾ ಪ್ರಯಾಣಿಕರು ಶೇ.58.43 ಪ್ರಮಾಣದಲ್ಲಿ ಸಂಚರಿಸಿರುತ್ತಾರೆ.
-
ದಿನಾಂಕ 11-06-2023 ರಿಂದ 10-07-2023ರವರೆಗಿನ ಒಂದು ತಿಂಗಳ ಅವಧಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಒಟ್ಟು 9.69 ಕೋಟಿ ಪ್ರಯಾಣಿಕರು ಸಂಚರಿಸಿದ್ದರೇ, ಅವರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 5.09 ಕೋಟಿಯಾಗಿದೆ. ಬಿಎಂಟಿಸಿಯಲ್ಲಿ 11.17 ಕೋಟಿ ಪ್ರಯಾಣಿಕರು ಸಂಚರಿಸಿದ್ದರೇ, ಇವರಲ್ಲಿ 5.38 ಕೋಟಿ ಮಹಿಳೆಯರು.
-
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 7.24 ಕೋಟಿ ಪ್ರಯಾಣಿಕರಲ್ಲಿ 4.02 ಕೋಟಿ ಮಹಿಳೆಯರು ಸಂಚರಿಸಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 4.77 ಕೋಟಿ ಪ್ರಯಾಣಿಕರು ಸಂಚರಿಸಿದ್ದರೇ, ಇವರಲ್ಲಿ 2.23 ಕೋಟಿ ಮಹಿಳೆಯರು.
-
ಒಟ್ಟು ಕಳೆದ ಒಂದು ತಿಂಗಳಿನಂದ ನಾಲ್ಕು ಸಾರಿಗೆ ನಿಗಮಗಳ ವಾಹನದಲ್ಲಿ 32.89 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಇವರಲ್ಲಿ 16.73 ಕೋಟಿ ಮಹಿಳಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿ, ಪ್ರಯೋಜನ ಪಡೆದಿದ್ದಾರೆ..
-
ದಿನಾಂಕ 11-06-2023ರಿಂದ ದಿನಾಂಕ 10-07-2023ರವರೆಗೆ ಒಂದು ತಿಂಗಳ ಅವಧಿಯಲ್ಲಿ ಕೆ ಎಸ್ ಆರ್ ಟಿ ಸಿ ನಿಗಮದ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಟಿಕೇಟ್ ಮೌಲ್ಯ ರೂ.151.25 ಕೋಟಿ ಆಗಿದೆ. ಬಿಎಂಟಿಸಿ ಸಂಸ್ಥೆ 69.56 ಕೋಟಿಯಾದ್ರೇ, ವಾಕರಸಾ ಸಂಸ್ಥೆ ರೂ.103.51 ಕೋಟಿಯಾದ್ರೇ, ಕೆಕೆರಸಾ ನಿಗಮದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ರೂ.77.62 ಕೋಟಿಯಾಗಿದೆ ಒಟ್ಟು ನಾಲ್ಕು ಸಾರಿಗೆ ನಿಗಮಗಳ ವಾಹನಗಳಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಟಿಕೇಟ್ ಮೌಲ್ಯ ರೂ.401.94 ಕೋಟಿಯಾಗಿದೆ.
ಹೆಚ್ಚುವರಿ ಬಸ್ ಸಂಚಾರ
ಶಕ್ತಿ ಯೋಜನೆ ಆರಂಭಗೊಂಡ ನಂತರ ಕಳೆದ ಒಂದು ತಿಂಗಳಲ್ಲಿ ಸಂಸ್ಥೆಗಳು ಹೆಚ್ಚುವರಿ ಬಸ್ಸುಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಕೆ ಎಸ್ ಆರ್ ಟಿಸಿಯಿಂದ 423, ಬಿಎಂಟಿಸಿಯಿಂದ 238, ವಾಕರಸಾ ಸಂಸ್ಥೆಯಿಂದ 986 ಹಾಗೂ ಕೆಕೆರಸಾ ನಿಗಮದಿಂದ 1500 ಬಸ್ಸುಗಳು ಸೇರಿದಂತೆ ಒಟ್ಟು 3147 ಪ್ರತಿ ದಿನ ಹೆಚ್ಚುವರಿ ಟ್ರಿಪ್ ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. .
ಪ್ರತಿ ದಿನ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಸರಾಸರಿ ಸಂಖ್ಯೆ ಒಟ್ಟು 55.77 ಲಕ್ಷವಾದ್ರೇ, ಪ್ರತಿ ದಿನ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಸರಾಸರಿ ಟಿಕೇಟ್ ಮೌಲ್ಯ 13.40 ಕೋಟಿಯಾಗಿದೆ ಎಂದು ಅವರು ವಿವರಿಸಿದ್ದಾರೆ.