ಬೆಂಗಳೂರು: ಐರಾವತ, ಅಂಬಾರಿ ನಂತರದ ಹೈಟೆಕ್ ಬಸ್ಸುಗಳ ಮೂಲಕ ಪ್ರಯಾಣಿಕರ ಪಾಲಿಗೆ ಸುಖಕರ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಬಡವರ ರಥವಾಗಿರುವ ‘ಕೆಂಪು ಸುಂದರಿ’ಗೂ ಹೈಟೆಕ್ ಸ್ಪರ್ಶ ನೀಡಿದೆ. ಐರಾವತ, ಅಂಬಾರಿ ನಂತರ ಇದೀಗ ‘ಅಶ್ವಮೇಧ’ ಪರ್ವಕ್ಕೆ KSRTC ಮುನ್ನುಡಿ ಬರೆದಿದೆ.
ಹೈಟೆಕ್ ತಂತ್ರಜ್ಞಾನ ಒಳಗೊಂಡಿರುವ ಸುಖಾಸೀನ ಸೌಲಭ್ಯದ ‘ಅಶ್ವಮೇಧ ಕ್ಲಾಸಿಕ್’ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಫೆಬ್ರವರಿ 5ರಂದು KSRTCಯ ಹೊಸ ಬ್ರಾಂಡ್ ‘ಅಶ್ವಮೇಧ’ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, KSRTC ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.
ವಿಶಿಷ್ಟ ಅಶ್ವಮೇಧ ಕ್ಲಾಸಿಕ್..!
‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್’ ನೂತನ ಕರ್ನಾಟಕ ಸಾರಿಗೆ ವಾಹನವನ್ನು ಹೊಸವಿನ್ಯಾಸ ಹಾಗೂ ಹೊಸಬ್ರಾಂಡ್ – ಅಶ್ವಮೇಧ (ಕ್ಲಾಸಿಕ್ ) – ಪ್ರಯಾಣದ ಮರು ಕಲ್ಪನೆ ಎಂಬ ಟ್ಯಾಗ್ ಲೈನ್ ನೊಂದಿಗೆ ಪರಿಚಯಿಸಲಾಗುತ್ತಿದೆ.
‘ಅಶ್ವಮೇಧ’ ಬಸ್ ಹಲವಾರು ವಿಶಿಷ್ಟತೆಗಳನ್ನು ಹೊಂದಿದೆ:
-
ವಾಹನದ 3420 ಮಿ.ಮಿ. ಎತ್ತರ ಇದ್ದು, 52 ಆಸನಗಳನ್ನು ಹೊಂದಿದೆ. ಪ್ರಯಾಣಿಕರ ಆಸನ ಬಕೆಟ್ ಟೈಪ್ ರೀತಿಯಲ್ಲಿದ್ದು, ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿರುತ್ತದೆ.
-
ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ. ಕಿಟಕಿಯಲ್ಲಿ ದೊಡ್ಡದಾದ ಟಿಂಟೆಡ್ ಗಾಜುಗಳನ್ನು ಅಳವಡಿಸಲಾಗಿದೆ.
-
ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ಗಮನಸೆಳೆದಿದೆ.
-
ಒಳಾಂಗಣದಲ್ಲಿ ಸತತವಾದ ಎಲ್.ಇ.ಡಿ ದೀಪ, ಹಿಂದೆ-ಮುಂದೆ ಮಾರ್ಗ ಎಲ್.ಇ.ಡಿ ಮಾರ್ಗ ಫಲಕ ಅಳವಡಿಕೆ ಮಾಡಲಾಗಿದೆ.
-
ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್, ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸ್ರ್ರ್ ಮತ್ತು ತುರ್ತು ಬಟನ್ ವ್ಯವಸ್ಥೆ, ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್, ವಿಶಾಲವಾದ ಲಗ್ಗೇಜ್ ಕ್ಯಾರಿಯರ್ ಇವೆ.
-
ಆಸನಗಳ ಮಧ್ಯೆ (leg space ) ಸ್ಥಳಾವಕಾಶ ಹೆಚ್ಚಿದೆ. ಇನ್ನು ಮುಂದೆ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿದೆ.
-
ಎಲ್ಲಾ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ‘ಅಶ್ವಮೇಧ’ ಸಂಪರ್ಕ ಕಲ್ಪಿಸಲಿದೆ.ಎಂದು ನಿಗಮದ ಮೂಲಗಳು ತಿಳಿಸಿವೆ.