ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಕ್ಕೆ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕೆ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನಿಗಮವು ಅರ್ಜಿ ಸಲ್ಲಿಕೆದಿಂದ ಆಯ್ಕೆ ಪ್ರಕ್ರಿಯೆಯವರೆಗೆ, ಘಟಕ ನಿಯೋಜನೆ ವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡಿಕೊಂಡು ಬಂದಿದೆ.
ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ, ಸ್ವಯಂ ಚಾಲಿತ ಚಾಲನಾ ಪರೀಕ್ಷೆ, ಆನ್ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್, ಅಟೋ ಜನರೇಟಡ್ ಅಂಕಪಟ್ಟಿ ನೀಡುವ ಮೂಲಕ 2000 ಚಾಲಕ/ ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿಗಳು, 441 ಅನುಕಂಪ ಆಧಾರದಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಗಿದ್ದು, ನಿಗಮದ ಸಮಗ್ರ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ. ಈ ನೇಮಕಾತಿ ಪ್ರಕ್ರಿಯೆ ಭಾರೀ ಮೆಚ್ಚುಗೆಗೆ ಕಾರಣವಾಗಿದ್ದು, ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಪ್ರತಿಷ್ಠಿತ ಪ್ರಶಸ್ತಿಯನ್ನು ಅಭಿನಂಧಿಸಿದೆ.
ಶನಿವಾರ ಸ್ಕಾಚ್ ಸಂಸ್ಥೆಯು ದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಕಾಚ್ ಫೌಂಡೇಶನ್ ಅಧ್ಯಕ್ಷ ಸಮೀರ್ ಕೊಚ್ಚರ್ ಹಾಗೂ ಸ್ಕಾಚ್ ಗ್ರೂಪ್ ಉಪಾಧ್ಯಕ್ಷ ಡಾ.ಗುರುಚರಣ್ ಧನ್ಜಾಲ್ ಅವರು KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರಿಗೆ ‘ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026’ನ್ನು ಪ್ರದಾನ ಮಾಡಿದರು.
ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು, 1997ರಲ್ಲಿ ಸ್ಥಾಪಿತವಾಗಿದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ದೇಶದ ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ, ಪಾರದರ್ಶಕ ನೀತಿ, ಯೋಜನೆ, ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿರುವ ಕೊಡುಗೆಗಳು
ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡಲಾಗುತ್ತದೆ. ಈ ಬಾರಿ ಈ ಪ್ರಶಸ್ತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಲಭಿಸಿದೆ.























































