ಬೆಂಗಳೂರು: ರಾಜ್ಯದ ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಅಕ್ರಮ ಗಣಿಗಾರಿಕೆಯ ಹೊಡೆತ ತಟ್ಟಿದೆ. ಬೇಬಿಬೆಟ್ಟ ಸುತ್ತ ಮುತ್ತ ಜೆಡಿಎಸ್ ಬೆಂಬಲಿಗರು ನಡೆಸುತ್ತಿತರುವ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಾಟ್ಟು ಬಿರುಕು ಬೀಳುವ ಆತಂಕವನ್ನು ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ನಂತರ ಹೆಚ್ಡಿಕೆ ಹಾಗೂ ಅವರ ಬೆಂಬಲಿಗರು ಸುಮಲತಾ ವಿರುದ್ದ ಮಾತಿನ ಸಮರಕ್ಕಿಳಿದಿದ್ದಾರೆ.
ಇದರಿಂದ ಕುಪಿತರಾದ ಸುಮಲತಾ ಅಂಬರೀಶ್ ಅವರು ಜಿಲ್ಲೆಯ ಅಧಿಕಾರಿಗಳ ಜೊತೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಿಡಿಗೇಡಿಗಳು ರಸ್ತೆಗಳಿಗೆ ಮಣ್ಣು ಸುರಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವ ಪ್ರಸಂಗವೂ ನಡೆದಿದೆ. ಈ ನಡುವೆ, ರಾಜ್ಯ ಸರ್ಕಾರದ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ರವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಾಚ್ಯ ಪದ ಬಳಕೆ ಮಾಡಿರುವುದು ಖಂಡನೀಯ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆ.ಆರ್.ಎಸ್ ಆಣೆಕಟ್ಟಿನ 30 ಕಿ.ಮೀ ವ್ಯಾಪ್ತಿಯ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕಗಳನ್ನು ಬಳಸುತ್ತಾರೆ. ಇದರಿಂದ ಕೆ.ಆರ್.ಎಸ್ ಗೋಡೆಗೆ ದಕ್ಕೆಯುಂಟಾಗಲಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿಯೂ ಸಹ ಬಂದಿವೆ. ಈ ನಿಟ್ಟಿನಲ್ಲಿ ಸುಮಲತಾ ರವರು ಕೆ.ಆರ್.ಎಸ್ ಆಣೆಕಟ್ಟು ಬಿರುಕು ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ತಮ್ಮ ಬಳಿ ಇರುವ ಮಾಹಿತಿಯನ್ನು ಹೇಳಬೇಕಿತ್ತು. ಅದನ್ನು ಬಿಟ್ಟು ಸುಮಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಯೋಗೇಶ್ವರ್ ಹೇಳಿದರು
ಕುಮಾರಸ್ವಾಮಿ ಅವರು ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರನ್ನು ಮಾದ್ಯಮಗಳು ವಿಜೃಂಭಿಸುವುದು ಬೇಡ. ಅವರು ಘನತೆ ಹಾಗೂ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.























































