ರಾಮನಗರ: ‘ನಾನು ಚನ್ನಪಟ್ಟಣದಲ್ಲೇ ಹುಟ್ಟಿದ್ದೇನೆ.., ೨೦೨೩ರ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚನ್ನಪಟ್ಟಣದಿಂದ ೫ ಬಾರಿ ಗೆಲುವು ಸಾಧಿಸಿದ್ದೇನೆ. ಕ್ಷೇತ್ರದ ಜನತೆ ನನಗೆ ಹಲವಾರು ಬಾರಿ ಆಶೀರ್ವದಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ವ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನತೆಗೆ ಮತ್ತಷ್ಟು ಸೇವೆಮಾಡುವ ಹಂಬಲ ನನ್ನದಾಗಿದ್ದು, ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ನಾನು ಬಿಜೆಪಿ ಪಕ್ಷದ ನೀತಿ ನಿಯಮಗಳನ್ನು ಒಪ್ಪಿ ಪಕ್ಷದ ಶಿಸ್ತಿನ ಸಿಫಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸಬೇಕು ಎಂಬುದು ನನ್ನ ಇಚ್ಚೆಯಾಗಿದೆ. ಇದಕ್ಕೆ ಪಕ್ಷದ ವರೀಷ್ಟರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗೇ ಸ್ಪರ್ಧೆ ಮಾಡುತ್ತೇನೆ ಎಂದು ಖಚಿತಪಡಿಸಿದರು.
ನಾವು ಯಾರಿಗೂ ಆಹ್ವಾನ ನೀಡಿಲ್ಲ: ಡಿ.ಕೆ.ಶಿವಕುಮಾರ್ ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿರ ಬಹುದು. ಆದರೆ, ನಮ್ಮ ಪಕ್ಷದಿಂದ ಯಾರಿಗೂ ಆಹ್ವಾನ ನೀಡಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ನಾವು ಆಹ್ವಾನ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ಎಲ್ಲಾ ಗೊಂದಲಗಳಿಗೆ ಸ್ಪಷ್ಟವಾಗಿ ತೆರೆಎಳೆದರು.