ಬೆಂಗಳೂರು: ಭಾರತದ ಸಂವಿಧಾನವನ್ನು ಬಿಜೆಪಿಯವರು ವ್ಯವಸ್ಥಿತವಾಗಿ ನಾಶ ಮಾಡಲು ಮುಂದಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ಪ್ರಿಯಾಂಕ್ ಖರ್ಗೆ ಹಾಗೂ ಪ್ರೋ. ಬಿ.ಕೆ. ಚಂದ್ರಶೇಖರ್ ಅವರ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಮುರುಳಿ ಮನೋಹರ್ ಜೋಷಿ ಅವರು ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಇನ್ನು ಅನಂತ ಕುಮಾರ್ ಹೆಗಡೆ ಅವರು ಯಾವುದೇ ಮುಸಲ್ಮಾನ ಹುಡುಗ ಹಿಂದೂ ಹೆಣ್ಣಿನ ಜತೆ ಮಾತನಾಡಿದರೆ ಆತನ ಕೈ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಮುರಳಿ ಮನೋಹರ್ ಜೋಷಿ ಅವರಿಗೆ ಪತ್ರಕರ್ತರು ದೆಹಲಿಯಲ್ಲಿ ಪ್ರಶ್ನೆ ಮಾಡಿದಾಗ, ನಾವು ಸಂವಿಧಾನ ಬದಲಾವಣೆಗೆ ಬದ್ಧ ಎಂದು ಹೇಳಿದ್ದರು ಎಂದು ಪ್ರೊ.ಬಿ.ಕೆ. ಚಂದ್ರಶೇಖರ್ ನೆನಪಿಸಿದರು.
ಬಿಜೆಪಿ ಅವರು ನಮ್ಮ ಸಂವಿಧಾನ ನಮ್ಮ ಸಂಸ್ಕೃತಿಯಲ್ಲ, ಅದು ಬ್ರಿಟನ್ ನ್ನಿಂದ ಪರಭಾರೆ ಮಾಡಿಕೊಂಡಿರುವ ಸಂವಿಧಾನ ಎಂದು ಹೇಳುತ್ತಾರೆ. ನಮ್ಮ ಸಂವಿಧಾನವನ್ನು ದೇಶದ ಪ್ರಮುಖರು ಸೇರಿ ರಚನೆ ಮಾಡಿದ್ದಾರೆ. ಇಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ವರ್ಗದ ಜನರಿಗೆ ಮೀಸಲಾತಿ ನೀಡಿದೆ. ಬ್ರಿಟನ್ ಸಂವಿಧಾನದಲ್ಲಿ ಮೀಸಲಾತಿ ಇದೆಯೇ? ನಮ್ಮದು ಪಾಶ್ಚಿಮಾತ್ಯ ಸಂವಿಧಾನದ ಪರಭಾರೆಯಲ್ಲ. ಬೇರೆ ದೇಶಗಳಲ್ಲಿನ ಕೆಲ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ಹೇಳಿದರು.
ಈಗ ದೇಶದ ನ್ಯಾಯಾಂಗ ವ್ಯವ್ಥೆಯ ಮೇಲೆ ದಾಳಿ ನಡೆಯುತ್ತಿದೆ. ಉಪರಾಷ್ಟ್ರಪತಿ ದಂಕರ್ ಅವರು ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ಆರಂಭಿಸಿದರು. ಇವರಿಗೆ ತಾಳ ಮದ್ದಳೆಯಂತೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನ್ಯಾಯಾಂಗದ ಮೇಲೆ ಮುಗಿ ಬಿದ್ದಿದ್ದಾರೆ. ನ್ಯಾಯಾಂಗ ವ್ಯವಸ್ಥೆಗಿಂತ ಸಂಸತ್ತು ಶ್ರೇಷ್ಠ ಎಂದು ಹೇಳುತ್ತಿದ್ದಾರೆ ಎಂದ ಪ್ರೊ.ಬಿ.ಕೆ. ಚಂದ್ರಶೇಖರ್, ರಾಜ್ಯದಲ್ಲಿ ಅಧಿವೇಶನಗಳಲ್ಲಿ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಆಮೂಲಕ ಯಾವುದೇ ವಿಚಾರ ಜನರಿಗೆ ತಲುಪದಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ರಿಜಿಜು ಅವರ ಪ್ರಕಾರ ನ್ಯಾಯಾಧೀಶ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲವಂತೆ. ಕತ್ತಲಲ್ಲಿ ನೋಟು ರದ್ದತಿ ತೀರ್ಮಾನ ಮಾಡಿದ ಬಿಜೆಪಿಯವರು ಈಗ ಈ ರೀತಿ ಹೇಳುತ್ತಿದ್ದಾರೆ. ಪಿಎಂ ಕೇರ್ ನಿಧಿಯಲ್ಲಿ ಪಾರದರ್ಶಕತೆ ಇಲ್ಲ ಎಂದ ಅವರು, ಈ ಕಾರಣಕ್ಕೆ ಸುಪ್ರೀಂ ಕೋರ್ಟ್ ನಿನ್ನೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು ಎಂದು ಹೇಳುತ್ತಿದ್ದಾರೆ. ಆಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೆ ತನ್ನ ಇಲಾಖೆ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದರು.
ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆರ್ ಎಸ್ ಎಸ್ ತತ್ವ ಸಿದ್ಧಾಂತವನ್ನು ಸರ್ಕಾರದ ನೀತಿಯಾಗಿ ಮಾಡಲಾಗುತ್ತಿದೆ ಎಂದು ನಾನು ಸದನದಲ್ಲಿ ಪ್ರಶ್ನೆ ಎತ್ತಿದಾಗ ಸಿ. ಟಿ ರವಿ ಅವರು ಇದನ್ನು ಒಪ್ಪದೇ, ಆರ್ ಎಸ್ ಎಸ್ ಎಂದಿಗೂ ಸಂವಿಧಾನ ವಿರೋಧ ಮಾಡಿಲ್ಲ. ಮನುಸ್ಮೃತಿಯನ್ನು ಸಮರ್ಥಿಸಿಕೊಂಡಿಲ್ಲ. ಈ ಬಗ್ಗೆ ದಾಖಲೆ ನೀಡುವಂತೆ ಆಗ್ರಹಿಸಿದರು. ದುರಾದೃಷ್ಟವಶಾತ್ ಇದಕ್ಕೆ ಸ್ಪೀಕರ್ ಅವರು ಅವಕಾಶ ನೀಡಿ, ದಾಖಲಾತಿ ನೀಡದಿದ್ದರೆ ನನ್ನ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕುವುದಾಗಿ ಹೇಳಿದರು. ನಾನು ಅಲ್ಲಿಗೆ ನಿಲ್ಲಿಸಿದೆ, ಮರು ದಿನ ಸಂವಿಧಾನ ಜಾರಿ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡರು, ಆರ್ ಎಸ್ ಎಸ್ ನ ಮುಖವಾಣಿಗಳಲ್ಲಿ ಬಂದಿರುವ ಲೇಖನಗಳನ್ನು ಕಲೆಹಾಕಿ ಸ್ಪೀಕರ್ ಅವರಿಗೆ ನೀಡಿದ್ದೆ ಎಂದರು.
ಬಿಜೆಪಿ ಹೇಗೆ ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ವಿಚಾರವಾಗಿ ನಾವು ಸಾರ್ವಜನಿಕ ಚರ್ಚೆ ಮಾಡಬೇಕು. ಜನರ ಮುಂದೆ ಬಿಜೆಪಿಯವರ ಬಣ್ಣ ಬಯಲು ಮಾಡಬೇಕು. ಇದೆಲ್ಲದರ ವಿರುದ್ಧ ನಾವು ಸಂವಿಧಾನ ಜಾರಿಯಾದ ದಿನವಾದ ಜನವರಿ 26ರಂದು ಸಮಾವೇಶ ಮಾಡುವ ಬಗ್ಗೆ ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.





















































