ಬೆಂಗಳೂರು: ಸಿಲಿಕಾನ್ ಸಿಟಿಯ ಕೋರಮಂಗಲ ಸುತ್ತಮುತ್ತಲ ಬಡಾವಣೆಗಳನ್ನು ಸಂಪರ್ಕಿಸುವ ಪ್ರದೇಶಕ್ಕೆ ಅತ್ಯುತ್ತಮ ಫ್ಲೈಓವರ್ ನಿರ್ಮಿಸುವ ಪರಿಕಲ್ಪನೆಗೆ ಸಾರ್ವಜನಿಕ ವಲಯದಲ್ಲಿ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ನಡೆಯುತ್ತಿರುವ ಈ ಫ್ಲೈಓವರ್ ಕಾಮಗಾರಿಗೆ ಸಚಿವರು ವೇಗ ನೀಡಿದ್ದಾರೆ. ಈ ಸಂಬಂಧ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಗಮನಸೆಳೆಯಿತು.
ಇದನ್ನೂ ಓದಿ.. KSRTCಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು..
ವಿಕಾಸ ಸೌಧದಲ್ಲಿ ಪರಿಶೀಲನಾ ಸಭೆ ನಡೆಸಿದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಉಮಾ ಶಂಕರ್, ಬಿಬಿಎಂಪಿ ವಿಶೇಷ ಆಯುಕ್ತಅವಿನಾಶ್, ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್, ಗುತ್ತಿಗೆದಾರರಾದ ರಘುನಾಥ್ ನಾಯ್ಡು ಮತ್ತು ಕೋರಮಂಗಲ ಹಾಗೂ STBED RWA (Resident Welfare Association) ಅಧ್ಯಕ್ಷರ ಉಪಸ್ಥಿತಿಯಲ್ಲಿ (8-1-2025) ಚರ್ಚೆ ನಡೆಸಿದ್ದರು. ಮಂಗಳವಾರ (11-2-2025 ರಂದು) ಮತ್ತೊಮ್ಮೆ ತಮ್ಮ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ಮಾಹಿತಿ ಸಂಗ್ರಹಿಸಿದರು. ಬಳಿಕ ಫ್ಲೈಓವರ್ ನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಮಗಾರಿಯು 10% ಪ್ರಗತಿ ಕಂಡು ಬಂದಿದೆ. ಮೊದಲು 35% ಕೆಲಸ ಪೂರ್ಣಗೊಂಡಿತ್ತು. ಗುತ್ತಿಗೆದಾರರು ಬಹಳ ದಿನಗಳಿಂದ ಬಾಕಿ ಉಳಿದ LG2 ಎರೆಕ್ಷನ್ ಕಾರ್ಯ ಪೂರ್ಣಗೊಳಿಸಿದ್ದು, ಇದು ಸೆಗ್ಮೆಂಟ್‌ಗಳ ಸ್ಥಾಪನೆ ವೇಗವಾಗಿ ನಡೆಸಲು ನೆರವಾಗಲಿದೆ. LG1 ನಿಂದ ಗುತ್ತಿಗೆದಾರರು 3 ಸ್ಪ್ಯಾನ್‌ಗಳನ್ನು ಪೂರ್ಣಗೊಳಿಸಿದ್ದು, 35 ಸೆಗ್ಮೆಂಟ್‌ಗಳ ಎರೆಕ್ಷನ್ ಆಗಿದೆ ಎಂದು ಅಧಿಕಾರಿಗಳು ರಾಮಲಿಂಗ ರೆಡ್ಡಿ ಅವರ ಗಮನಸೆಳೆದರು.
ಫ್ಲೈಓವರ್ ಕೆಳಗಿನ ಪ್ರದೇಶದಲ್ಲಿ ಪಾಳುಮಣ್ಣು ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲಾಗಿದ್ದು, ಸಾರಿಗೆ ಸುಗಮವಾಗಿ ಸಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯ ಕಾಲುವೆಗಳ ಕಾಮಗಾರಿಯೂ ಪ್ರಗತಿಯಲ್ಲಿ ಇದೆ. ಈ ಕೋರವಂಗಲ ಫ್ಲೈಓವರ್ ಕಾಮಗಾರಿಯನ್ನು ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಬಿಬಿಎಂಪಿ ಇಂಜಿನಿಯರ್‌ಗಳಿಗೆ ಸಚಿವರು ಇದೇ ವೇಳೆ ಸೂಚನೆ ನೀಡಿದರು.