ಉಡುಪಿ : ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮ ವಿಜಯದಶಮಿ ದಿನವಾದ ಶುಕ್ರವಾರ ನೆರವೇರಿತು. ನವರಾತ್ರಿ ಸಂಭ್ರಮದ ಪ್ರಯುಕ್ತ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಯಿಂದ ಆಗಮಿಸುವ ಭಕ್ತರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ, ನಂಬಿಕೆಯನ್ನು ಪುನರುಜ್ಜೀವನಗೊಳಿಸಿದರು. ಗುರುವಾರ ರಾತ್ರಿ ಸಂಭ್ರಮದಿಂದ ತಾಯಿ ಸನ್ನಿಧಿಯಲ್ಲಿ ನಡೆದ ರಥೋತ್ಸವ ನಂತರ ವಿಜಯದಶಮಿಯಂದು ನೆರವೇರಿದ ಈ ಕೈಂಕರ್ಯ ಗಮನಸೆಳೆಯಿತು.
ಏನಿದು ವಿದ್ಯಾರಂಭ..?
ಕುಂದಾಪುರ ತಾಲೂಕಿನ ಕೊಲ್ಲೂರು ಪುಣ್ಯ ಕ್ಷೇತ್ರ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಪೂಜೆಗೆ ಪ್ರಶಸ್ತ ಸ್ಥಳ. ವಿಜಯದಶಮಿಯ ದಿನದಂದು ನೂರಾರು ಮಂದಿ ಕೇರಳ ಮತ್ತು ಕರ್ನಾಟಕದ ಭಕ್ತರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.
ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ಅಕ್ಷರಭ್ಯಾಸ ನಡೆಸುವವರು ಕೇರಳದ ಭಕ್ತರು. ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡಿಸುವುದರಿಂದ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಅನ್ನೋದು ಕೇರಳಿಗರ ಭಕ್ತಿ ಮತ್ತು ನಂಬಿಕೆ. ಕೇರಳ ವಿದ್ಯೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರೋದಕ್ಕೆ ಮೂಕಾಂಬಿಕೆಯ ಆಶೀರ್ವಾದವೇ ಕಾರಣ ಅನ್ನುವ ಮಾತೂ ಇದೆ. ವಿಜಯದಶಮಿ ಎಲ್ಲ ಆರಂಭಗಳಿಗೂ ಸೂಕ್ತವಾದ ದಿನ. ಹೀಗಾಗಿ ವಿಜಯದಶಮಿಯ ವಿದ್ಯಾರಂಭಕ್ಕೆ ವಿಶೇಷವಾದ ಮಹತ್ವ ಬಂದಿದೆ. ವರ್ಷಂಪ್ರತಿ ಈ ದಿನದಂದು ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ವಿದ್ಯಾರಂಭಕ್ಕೆ ಕಾದು ಕುಳಿತಿರುತ್ತಾರೆ. ಈ ಪ್ರಕ್ರಿಯೆ ಮಧ್ಯಾಹ್ನ 1.30 ರ ವರೆಗೂ ನಡೆಯುತ್ತದೆ. ಕೊಲ್ಲೂರಿನ ರೀತಿ ಅಕ್ಷರಭ್ಯಾಸ ಶ್ರಂಗೇರಿ ಶಾರದಾಂಬಾ ಕ್ಷೇತ್ರವನ್ನ ಹೊರತುಪಡಿಸಿ ಬೇರೆಲ್ಲಿಯೂ ನಡೆಯೋದಿಲ್ಲ ಅನ್ನೋದು ವಿಶೇಷತೆ.
ಕೊಲ್ಲೂರು ಭಾಗದಲ್ಲಿ ವಿಜಯ ದಶಮಿಯಂದು ಹೊಸ್ತು ಹಬ್ಬವನ್ನು ಆಚರಿಸುವುದು ಪದ್ದತಿ.ಮದ್ಯಾಹ್ನದ ಸುಮಾರಿಗೆ ತಾಯಿ ಸನ್ನಿಧಿಯಲ್ಲಿ ನಡೆಯುವ ಕದಿರು ಪೂಜೆಯ ನಂತರ ಊರಿನವರಿಗೆ ಕದಿರು ವಿತರಣೆಯ ಶಾಸ್ತ್ರ ನಡೆಯುತ್ತದೆ. ದೇವಳದಲ್ಲಿ ಕದಿರು ನೀಡಿ ಹೊಸ್ತು ಆಚರಿಸುವ ದಿನದಂದೇ ಕೊಲ್ಲೂರಿನ ಎಲ್ಲಾ ಮನೆಗಳಲ್ಲಿ ಹೊಸ್ತು ಆಚರಿಸಲಾಗುತ್ತದೆ.
ಪ್ರತಿ ವರ್ಷ ಈ ವಿದ್ಯಾರಂಭ ಪ್ರಕ್ರಿಯೆ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು, ತಾಯಿಯ ಸನ್ನಿಧಿಯಲ್ಲಿ ವಿಧ್ಯಾರಂಭ ಮಾಡಿಸುವುದರಿಂದ ವಿದ್ಯೆಯಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗುತ್ತದೆ ಎನ್ನುವುದು ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಮಾಡಲು ಬರುವ ಜನರ ಧಾರ್ಮಿಕ ನಂಬಿಕೆ. ಈ ಬಾರಿ ಕೊರೋನಾ ಹಿನ್ನೆಲೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡು ಎಲ್ಲಾ ಧಾರ್ಮಿಕ ಪ್ರಕ್ರಿಯೆಗಳನ್ನು ಆಚರಿಸಲಾಗಿದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ..