ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಶಾಸಕ ಯು.ಟಿ.ಖಾದರ್ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರೂ ಆದ ಕರಾವಳಿಯ ಶಾಸಕ ಮಂಜುನಾಥ್ ಭಂಡಾರಿ ಅಭಿನಂಧಿಸಿದ್ದಾರೆ.
ಯು.ಟಿ.ಖಾದರ್ ಅವರು ಐದು ಬಾರಿ ಶಾಸಕರಾಗುವ ಮೂಲಕ ಹಿರಿತನದ ಸ್ಥಾನದಲ್ಲಿದ್ದಾರೆ. ಅವರು ಸಚಿವರಾಗಿ, ಶಾಸಕಾಂಗ ಪಕ್ಷದ ಉಪನಾಯಕರಾಗಿ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾದವರು. ಇದೀಗ ಇವರು ಇಡೀ ರಾಜ್ಯದ ಶಕ್ತಿ ಕೇಂದ್ರವನ್ನು ಮುನ್ನಡೆಸುವ ಸ್ಥಾನವನ್ನು ಆಲಂಕರಿಸಿರುವುದು ಕನ್ನಡ ನಾಡಿನ ಹೆಮ್ಮೆ ಎಂದು ವಿಧಾನಪರಿಷತ್ ಸದಸ್ಯರೂ ಆದ ಮಂಜುನಾಥ್ ಭಂಡಾರಿ ಬಣ್ಣಿಸಿದ್ದಾರೆ.
ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ವಿಧಾನಮಂಡಲ ನಮ್ಮ ರಾಜ್ಯದ್ದು. ನ್ಯಾಯಾಂಗಕ್ಕೆ ಸರಿಸಮಾನವಾದ ಈ ಸದನದ ಸ್ಪೀಕರ್ ಸ್ಥಾನವನ್ನು ಯು.ಟಿ.ಖಾದರ್ ಅವರು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಮಂಜುನಾಥ್ ಭಂಡಾರಿ, ಪ್ರತಿಪಾದಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಧಾನಸಭಾಧ್ಯಕ್ಷರಾದ ಎರಡನೇ ಜನಪ್ರತಿನಿಧಿ ಯು.ಟಿ.ಖಾದರ್ ಆಗಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಖಾದರ್ ಪಾತ್ರರಾಗಿದ್ದಾರೆ ಎಂದು ಮಂಜುನಾಥ್ ಭಂಡಾರಿ ಗುಣಗಾನ ಮಾಡಿದ್ದಾರೆ.