ಅಭಿವೃದ್ಧಿಗೆ ಹಾತೊರೆಯುತ್ತಿರುವ ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ..
ಬೆಂಗಳೂರಿನಲ್ಲಿ ಕೇರಳ ಸಮಾಜಂ ಸದಸ್ಯರ ಜತೆ ಡಿಸಿಎಂ ಸಂವಾದ
ಬೆಂಗಳೂರು: ಕಳೆದ ಎಪ್ಪತ್ತು ವರ್ಷಕ್ಕೂ ಹೆಚ್ಚುಕಾಲ ಅಭಿವೃದ್ಧಿಯಲ್ಲಿ ಜಿಡ್ಡುಗಟ್ಟಿದ ಸ್ಥಿತಿಯಲ್ಲಿರುವ ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ ಎಂದು ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ʼಸುವರ್ಣ ಕರ್ನಾಟಕ ಕೇರಳ ಸಮಾಜಂʼ ಸದಸ್ಯರ ಜತೆ ಸಂವಾದ ನಡೆಸಿದ ಡಿಸಿಎಂ, “ಕೇರಳದಲ್ಲಿ ಬದಲಾವಣೆ ಅನ್ನುವುದು ಆಗಲೇಬೇಕು. ಎಲ್‌ಡಿಎಫ್ ಹಾಗೂ ಯುಡಿಎಫ್ ನಡೆಸಿದ ದುರಾಡಳಿತ ಸಾಕು. ಇದಕ್ಕೆ ಸಮಸ್ತ ಕೇರಳಿಗರೆಲ್ಲ ಕೈಜೋಡಿಸಿ ಏಳು ದಶಕಗಳ ನಂತರ ಹೊಸ ರಾಜಕೀಯ ಶಕ್ತಿಯ ಉದಯಕ್ಕೆ ಸಹಕಾರ ನೀಡಬೇಕು ಎಂದರು.

ಉತ್ತಮ ಸಾಕ್ಷರತೆ ಹೊಂದಿದ್ದರೂ ಅಭಿವೃದ್ಧಿಯಲ್ಲಿ ಕೇರಳ ಹಿಂದೆ ಬಿದ್ದಿದೆ. ಯಾಕೆ ಈ ವೈರುಧ್ಯ ಎಂದು ಎಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಇದುವರಿಗೂ ಆಗಿರುವ ನಷ್ಟ ಸಾಕು. ಈ ಬಾರಿ ಬಿಜೆಪಿ ಅವಕಾಶ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಮನವಿ ಮಾಡಿದರು.
ಅಭಿವೃದ್ಧಿ ಎಂದರೆ ಬಿಜೆಪಿಯಷ್ಟೇ ಆಯ್ಕೆ ಮತ್ತು ಪರಿಹಾರ. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿಪರ ಇರುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಕೇರಳ ಸಮಾಜದ ಸದಸ್ಯರು ಉಪ ಮುಖ್ಯಮಂತ್ರಿ ಅವರಿಗೆ ಕೇರಳ ಪ್ರವಾಸೋದ್ಯಮಕ್ಕೆ ದ್ಯೋತಕವಾದ ಅಲೆಪ್ಪಿ ಬೋಟ್‌ಹೌಸ್ ಸ್ಮರಣಿಕೆ ನೀಡಿ ಗೌರವಿಸಿದರು.



























































