ಮಂಗಳೂರು: ಕೊರೋನಾ ಹೆಮ್ಮಾರಿಯನ್ನು ಹಿಮ್ನೆಟ್ಟಲು ರಾಜ್ಯಾದ್ಯಂತ ಲಾಕ್‌ಡೌನ್ ಮಾದರಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ ಈ ನಿಯಮದಿಂದಾಗಿ ಅನೇಕ ಬಡಪಾಯಿಗಳ ಬದುಕು ಮೂರಾಬಟ್ಟೆ ಎಂಬಂತಾಗಿದೆ. ನಗರ ಪ್ರದೇಶಗಳಲ್ಲಿ ಉದ್ಯೋಗ, ಮೂಲ ಸೌಲಭ್ಯ ಇಲ್ಲದೆ ಜನ ಪರದಾಡುವಂತಾಗಿದೆ. ಇಂತಹಾ ಸಂದರ್ಭದಲ್ಲಿ ಮಂಗಳೂರಿನ ಯುವಕರೊಬ್ಬರು ಅಸಹಾಯಕರಿಗೆ ನೆರವಾಗುತ್ತಾ ನಾಡಿನ ಗಮನಸೆಳೆದಿದ್ದಾರೆ.

ಬಂದರುನಗರಿಯಲ್ಲಿ ಸದ್ದು ಗದ್ದಲ ಇಲ್ಲದೇ ಬೀದಿಗೆ ಇಳಿದು ತನ್ನಿಂದ ಆದ ಸಹಾಯ ಮಾಡುತ್ತಿರುವ ಕಿಶೋರ್ ಕುಮಾರ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಕೋವಿಡ್ ಸಮಯದಲ್ಲಿ ಕಷ್ಟದಲ್ಲಿ ಸಿಲುಕಿದವರಿಗೆ ಇವರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ತಾನೇ ಅಡುಗೆ ಮಾಡಿ, ಬೆಳ್ಳಂ ಬೆಳಗ್ಗೆ ಬಿಸಿಬಿಸಿ ಊಟದ ಪೊಟ್ಟಣ ತೆಗೆದುಕೊಂಡು ತನ್ನ ಸ್ಕೂಟರ್‌ನಲ್ಲೇ ಬೀದಿ ಬೀದಿ ಸುತ್ತಾಡಿ ಅಸಹಾಯಕರಿದ್ದ ಸ್ಥಳಕ್ಕೆ ತೆರಳಿ ಹಂಚುತ್ತಿದ್ದಾರೆ.
ವೃತ್ತಿಯಲ್ಲಿ ಸಣ್ಣ ಹೊಟೇಲ್ ನಡೆಸುವ ಕಿಶೋರ್ ಕುಮಾರ್ ಕೊರೋನ ಮಹಾಮಾರಿ ಸಮಯದಲ್ಲಿ ಸೈಲೆಂಟ್ ಅನ್ನದಾತನಾಗಿ ಮಂಗಳೂರಿನಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.