ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಚಿವ ಎಚ್ ವೈ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿರುವ ಕಾಂಗ್ರೆಸ್ ಮುಖಂಡರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಇಷ್ಟು ದಿನ ಬಿಟ್ಟು ಈಗಲೇ ಯಾಕೆ ಈ ವಿಷಯವನ್ನು ಕೈಗೆತ್ತಿಕೊಂಡರು? ಹೈಕೋರ್ಟಿನಲ್ಲಿ ದಾಖಲಾಗಿರುವ ರಿಟ್ ಪಿಟಿಸಶನ್ ಇದಕ್ಕೆ ಕಾರಣವೇ ಎಂಬ ಸಂಶಯವನ್ನು ಸಚಿವರು ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಆಗುವ ಬೆಳವಣಿಗೆಗಳ ಕುರಿತು ತನಿಖಾಧಿಕಾರಿಗಳು ಹೈಕೋರ್ಟಿಗೆ ವರದಿ ಸಲ್ಲಿಸುತ್ತಾರೆ. ಹೀಗಾಗಿ ತನಿಖಾಧಿಕಾರಿಗಳ ಮೇಲೆ ಪ್ರಭಾವವಿರುವ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರು ಈಗ ಈ ಪ್ರಕರಣದಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ಈ ಹಿಂದೆ ಮಾಜಿ ಸಚಿವ ಎಚ್ ವೈ ಮೇಟಿ ಪ್ರಕರಣದಲ್ಲಿ ಏನಾಯ್ತು? ಸಂತ್ರಸ್ತ ಮಹಿಳೆ ದೂರು ನೀಡಿದರೂ ಮಾಜಿ ಸಚಿವರ ಹೆಸರನ್ನೇ ದೂರಿನಲ್ಲಿ ದಾಖಲಿಸಿ ಕೊಳ್ಳಲಿಲ್ಲ. ಮಾಜಿ ಸಚಿವರ ಹೆಸರಿಲ್ಲದೆ ಪ್ರಕರಣವನ್ನು ತನಿಖೆ ನಡೆಸಿ ಮುಚ್ಚಿ ಹಾಕಲಾಯಿತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅಂಥವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.