ಮಂಗಳೂರು: ದಕ್ಷಿಣ ಕನ್ನಡದಲ್ಲಿರುವ ಪುರಾಣ ಪ್ರಸಿದ್ದ ಕಟೀಲು ದುರ್ಗಾಪರಮೇಶ್ವರಿ ದೇವಾಲಯ ತನ್ನ ಮಹಿಮೆಯಿಂದಾಗಿ ನಾಡಿನೆಲ್ಲೆದೆ ಭಕ್ತರನ್ನು ಹೊಂದಿದೆ. ಭಕ್ತ ಸಮೂಹವೂ ತನ್ನದೇ ಆದ ರೀತಿಯಲ್ಲಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮಂಗಳೂರು ಹೊರವಲಯದ ಪಕ್ಷಿಕೆರೆಯ ಪ್ರತಾಪ್ ಆಚಾರ್ಯ ಎಂಬವರು ತಮ್ಮ ವಿಶಿಷ್ಟ ಸೇವೆ ಮೂಲಕ ದೇವಿಯ ಭಕ್ತರ ಗಮನಸೆಳೆದಿದ್ದಾರೆ. ಇವರು ಹಲಸಿನ ಮರದ ಎಲೆಯಲ್ಲಿ ಕಟೀಲಿನ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿಯ ಪ್ರತಿಬಿಂಬವನ್ನು ಚಿತ್ರಿಸಿದ್ದಾರೆ.
ತಾನು ಭಕ್ತಿಯಿಂದ ಚಿತ್ರಿಸಿರುವ ಈ ಕೃತಿಯನ್ನು ಪ್ರತಾಪ್ ಆಚರ್ಯ ಅವರು ಶ್ರಾವಣ ಶುಕ್ರವಾರವಾದ ನಿನ್ನೆ (ಆಗಸ್ಟ್ 27) ಕಟೀಲು ದೇವಸ್ಥಾನಕ್ಕೆ ತಂದು ದೆವಿಗೆ ಸಮರ್ಪಿಸಿದ್ದಾರೆ. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ವೆಂಕಟೇಶ ಆಸ್ರಣ್ಣ, ಶ್ರೀಕರ ಆಸ್ರಣ್ಣ ಉಪಸ್ಥಿತಿಯಲ್ಲಿ ಈ ದೇವಿಯ ಚಿತ್ರವನ್ನು ಸ್ವೀಕರಿಸಲಾಯಿತು.
ಇದನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿಪೂರ್ವ ಕಾಲೇಜಿನ ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಅನಂತ ಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ. ಪ್ರತಾಪ್ ಆಚಾರ್ಯರು ಇದೇ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ಇವರ ಭಕ್ತಿಯನ್ನು ಪರಿಗಣಿಸಿದ ಅರ್ಚಕ ಸಮೂಹ ದೆವಿಯ ಶೇಷವಸ್ತ್ರ ನೀಡಿ ಗೌರವಿಸಿದ ಸನ್ನಿವೇಶವೂ ಭಕ್ತರ ಗಮನಕೇಂದ್ರೀಕರಿಸಿತು.