ದೆಹಲಿ: ದೇಶವ್ಯಾಪಿ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ. ಈ ವರೆಗೂ ಆಯಾ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ತಕ್ಕಂತೆ ವಾಹನಗಳಿಗೆ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ. ಅಂದರೆ ಬೆಂಗಳೂರಿನ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ‘KA-01-#####’, ಮಂಗಳೂರಿನ ಆರ್‌ಟಿಒ ವ್ಯಾಪ್ತಿಯಲ್ಲಿ ‘KA-19-#####’ ನಂಬರ್ ನೀಡಲಾಗುತ್ತದೆ. ಕೇರಳದಲ್ಲಿ ‘KL-##-#####’, ತಮಿಳುನಾಡಿನಲ್ಲಿ ‘TN-##-#####’ ಸಂಖ್ಯೆಗಳು ಸಾಮಾನ್ಯವಾಗಿವೆ. ಇನ್ನು ಮುಂದೆ ಭಾರತ್ ಸೀರಿಸ್ ಆರಂಭವಾಗಲಿದೆ.
ಈ ಕುರಿತು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ‘ಭಾರತ್ ಸೀರಿಸ್’ ವ್ಯವಸ್ಥೆಯಡಿ ಏಕರೂಪ ಮಾದರಿಯ ನೋಂದಣಿ ಸಂಖ್ಯೆ ಅಸ್ತಿತ್ವಕ್ಕೆ ಬರಲಿದೆ. ಮುಂದಿನ ತಿಂಗಳ 15ರಿಂದ ‘BH’ ಸೀರಿಸ್‌ನಲ್ಲಿ ವಾಹನಗಳ ನೋಂದಣಿ ಸಂಖ್ಯೆ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ.
ಬಿಎಚ್ ಸೀರೀಸ್ ವಾಹನಗಳ ನೋಂದಣಿ ಸಂಖ್ಯೆ ಸ್ವಯಂಚಾಲಿತವಾಗಿ “YY BH#### XX’ ಮಾದರಿಯಲ್ಲಿ ಇರಲಿದೆ. ‘YY ‘ಎಂಬುದು ವಾಹನ ನೋಂದಣಿಯ ವರ್ಷ. ‘BH’ ಎಂಬುದು ಭಾರತ್ ಸೀರೀಸ್ ಎಂಬ ಸೂಚಕ. “XX’ ಎಂಬುದು ನೋಂದಣಿಯ ಭಾಗ.
ಎಲ್ಲಾ ರಾಜ್ಯಗಳಿಗೆ ಹೊಂದುವಂತೆ ‘ಭಾರತ್ ಸರಣಿ’ ನೋಂದಣಿ ಸಂಖ್ಯೆಗಳ ವ್ಯವಸ್ಥೆಯನ್ನು ರೂಪಿಸಲಾಗಿದೆ.
ರಕ್ಷಣಾ ಇಲಾಖೆಯ ಸಿಬ್ಬಂದಿ, ಕೇಂದ್ರ-ರಾಜ್ಯ ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಕಂಪನಿಗಳು, ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗಾಗಿ ‘ಬಾರತ್ ಸರಣಿ’ ಆರಂಭಿಸಲಾಗುತ್ತಿದೆ. ಈ ಸಂಬಂಧ ಸೆಪ್ಟೆಂಬರ್ 15ರಿಂದ ಕೇಂದ್ರ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ (12ನೇ) ಜಾರಿಗೆ ಬರುತ್ತದೆ.
ಪ್ರಸ್ತುತ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ಮತ್ತೊಂದು ರಾಜ್ಯಗಳಿಗೆ ಹೋದರೆ 2 ವರ್ಷಗಳ ವರೆಗೆ ಮಾತ್ರ ಉಳಿಯಬಹುದು. ಇದೀಗ ಭಾರತ್ ಸೀರಿಸ್ ಮೂಲಕ ಆ ಪರದಾಟ ತಪ್ಪಲಿದೆ.