ಮಂಗಳೂರು: ದೀಪಾವಳಿ ನಂತರ ಕರಾವಳಿಯ ದೇಗುಲಗಳು ಸಾಲು ಸಾಲು ಉತ್ಸವಗಳಿಂದಾಗಿ ಆಸ್ತಿಕರ ಚಿತ್ತ ಸೆಳೆಯುತ್ತಿದೆ. ಅದರಲ್ಲೂ ಮಂಗಳೂರಿನ ರಥಬೀದಿಯ ಪುರಾಣ ಪ್ರಸಿದ್ದ ವೆಂಕಟರಮಣ ದೇವಸ್ಥಾನದ ಕೈಂಕರ್ಯಗಳು ಮಹೋತ್ಸವ ರೀತಿ ಗಮನಸೆಳೆದಿದೆ.
“ಕಾರ್ತಿಕ ಏಕಾದಶಿ” ಅಂಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶಿಷ್ಟ ಪೂಜಾ ಕಾರ್ಯಕ್ರಮ ನೆರವೇರಿತು. ಶ್ರೀ ವೀರ ವೆಂಕಟೇಶ ದೇವರಿಗೆ ಅತೀ ವಿಶೇಷ ಪಂಚಾಮೃತ, ಗಂಗಾಭಿಷೇಕ , ಕನಕಾಭಿಷೇಕ, ಪುಳಕಾಭಿಷೇಕಗಳು ನೆರವೇರಿದವು.
ಸಂಜೆ ಶ್ರೀ ದೇವರ ಮಹಾಪೂಜೆಯ ಅನನ್ಯ ಸನ್ನಿವೇಶವನ್ನು ಭಕ್ತಸಾಗರ ಕಣ್ತುಂಬಿಕೊಂಡಿತು. ಕೋವಿಡ್ ಸಂಕಟ ಕಾಲದಲ್ಲಿ ಉತ್ಸವಗಳಿಂದ ಭಕ್ತರು ದೂರ ಉಳಿಯಬೇಕಾಗಿತ್ತು. ಇದೀಗ ಆ ರೀತಿಯ ಭಯದ ಸನ್ನಿವೇಶ ದೂರವಾಗಿದೆ. ಹಾಗಾಗಿ ಇಂದಿನ ಪ್ರಭೋದಿನಿ ಏಕಾದಶಿ ಸಂದರ್ಭದ ಉತ್ಸವ ರೀತಿಯ ಮಹೋತ್ಸವ ಎಲ್ಲರ ಗಮನಕೇಂದ್ರೀಕರಿಸಿತು.
ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ.ಎಲ್.ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪ್ರಧಾನ ಅರ್ಚಕರಾದ ವೇದಮೂರ್ತಿ ಚಂದ್ರಕಾಂತ್ ಭಟ್, ವೇದಮೂರ್ತಿ ಹರೀಶ್ ಭಟ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.