ಬೆಂಗಳೂರು: ಮಾಧ್ಯಮಲೋಕದಲ್ಲಿ ಮತ್ತೊಂದು ಬದಲಾವಣೆಯ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಮಾಧ್ಯಮ ಕ್ಷೇತ್ರದ ಡಿಜಿಟಲ್ ವ್ಯವಸ್ಥೆಗೆ ಆಧಾರವಾಗಿರುವ ಡಿಜಿಟಲ್ ಮೀಡಿಯಾಗಳಿಗಾಗಿಯೇ ನೂತನ ವೇದಿಕೆಯೊಂದು ಅಸ್ತಿತ್ವಕ್ಕೆ ಬಂದಿದೆ. ಕರುನಾಡಿನ ಮಾಧ್ಯಮ ಕ್ಷೇತ್ರಕ್ಕೆ ಇದು ಆಸರೆಯಾಗಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಸ್ಥಿತ್ವಕ್ಕೆ ಬಂದಿದೆ. ಈ ಮೀಡಿಯಾ ಫೊರಂನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸಮೀವುಲ್ಲಾ ಬೆಲಗೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
- ಅಧ್ಯಕ್ಷರು : ಸಮೀವುಲ್ಲಾ ಬೆಲಗೂರು
- ಉಪಾಧ್ಯಕ್ಷರು : ಸುನೀಲ್, ವಸಂತ ಬಿ ಈಶ್ವರಗೆರೆ.
- ಪ್ರಧಾನ ಕಾರ್ಯದರ್ಶಿ: ಶಿವು ಬೆಸಗರಹಳ್ಳಿ
- ಜಂಟಿ ಕಾರ್ಯದರ್ಶಿಗಳು: ರಜನಿ, ಮಾಲತೇಶ್ ಅರಸ್ ಹರ್ತಿಕೋಟೆ,
- ಖಜಾಂಚಿ: ಸನತ್ ರೈ,
- ಕಾರ್ಯಕಾರಿ ಸಮಿತಿ ಸದಸ್ಯರು: ಎಂ.ಎಸ್.ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು.
ನೂತನ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಡಿಜಿಟಲ್ ಮೀಡಿಯಾ ಎಂಬುದು ಪ್ರತಿಯೊಬ್ಬರಿಗೂ ನವಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗಿದೆ. ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಹೀಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ ಎಂದರು.
ಆಂದ್ರಪ್ರದೇಶ ಮತ್ತು ತಮಿಳುನಾಡು ಸಹಿತ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ಥಿತ್ವದಲ್ಲಿವೆ. ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಮ್ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.