ಬೆಳಗಾವಿ: ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಸುಮಾರು 1 ಲಕ್ಷ 10 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಇದೇ ವೇಳೆ ಗೋಕಾಕ್ ತಾಲೂಕಿನ ಕೊಣ್ಣೂರು ಮಾರುಕಟ್ಟೆ ಪ್ರದೇಶಕ್ಕೆ ನೀರು ನುಗ್ಗಿದೆ. ಕೊಣ್ಣೂರು ಪಟ್ಟಣದ ಮಾರುಕಟ್ಟೆ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ಗೋಕಾಕ, ಮೂಡಲಗಿ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಗೋಕಾಕ್ ನಗರದ ಲೋಳಸೂರು ಸೇತುವೆ ಕೂಡಾ ಜಲಾವೃತವಾಗಿದೆ.
ಗೋಕಾಕ್ ನಗರದ ಮಟನ್ ಮಾರ್ಕೆಟ್, ಭೋಜಗರ್ ಗಲ್ಲಿ, ಉಪ್ಪಾರ ಗಲ್ಲಿಯಲ್ಲಿ ಮನೆಗಳು ಜಲಾವೃತವಾಗಿದ್ದು ನಿವಾಸಿಗಳು ಪರದಾಡುವಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 5 ತಾಲೂಕುಗಳ 51ಗ್ರಾಮಗಳು ಜಲಾವೃತವಾಗಿದ್ದು 26 ಕಾಳಜಿ ಕೇಂದ್ರ ತೆರೆದು, 2000 ಜನರಿಗೆ ಆಶ್ರಯ ನೀಡಲಾಗಿದೆ. ಸುಮಾರು 5065 ಜನರು,1011ಜಾನುವಾರುಗಳ ರಕ್ಷಣೆ ಮಾಡಲಾಗಿದೆ.
ಜೋರ್ಲಾ ಬಳಿ ಗುಡ್ಡ ಕುಸಿದು ಗೋವಾ-ಕರ್ನಾಟಕ ನಡುವಿನ ರಸ್ತೆ ಬಂದ್ ಆಗಿದೆ. ರಾಷ್ಟ್ರೀಯ ಹೆದ್ಧಾರಿ-4ರ ಮೇಲೆ ನದಿ ಬಂದು ಮಹಾರಾಷ್ಟ್ರ- ಕರ್ನಾಟಕ ನಡುವಿನ ರಸ್ತೆ ಬಂದ್ ಆಗಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆ ಸುತ್ತ ಮುತ್ತ ಸುಮಾರು 36 ಸೇತುವೆಗಳು ಮುಳುಗಡೆಯಾಗಿದ್ದು, ರಾಷ್ಟ್ರೀಯ ಹೆದ್ಧಾರಿ, ಜಿಲ್ಲಾ ರಸ್ತೆ ಸೇರಿ 47ಕಡೆ ರಸ್ತೆ ಸಂಚಾರ ಸ್ಥಗಿತಗೊಂಡಿವೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 223 ಮನೆಗಳಿಗೆ ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಖಾನಾಪೂರ ತಾಲೂಕಿನಲ್ಲಿ ವಿದ್ಯುತ್ ತಗುಲಿ ಒರ್ವ ಸಾವನ್ನಪ್ಪಿದ್ದಾನೆ.