ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ಸಾಧ್ಯತೆ ಕುರಿತ ಚರ್ಚೆ ನಡೆದಿರುವಾಗಲೇ ಬಿಜೆಪಿ ಪಡಸಾಲೆಯಿಂದ ಮತ್ತೊಂದು ಸ್ಫೋಟಕ ಮಾಹಿತಿಯೊಂದು ಕೇಳಿಬಂದಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಸರ್ಕಾರ ರಚನೆಗೆ ಕಾರಣರಾಗಿದ್ದ ವಲಸಿಗ ಮಂತ್ರಿಗಳು ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಇಂದಿನ ಸಂಪುಟ ಸಭೆ ಸಂದರ್ಭದಲ್ಲಿ ಇದಕ್ಕೆ ಪೂರಕವಾದ ಸನ್ನಿವೇಶವೊಂದು ವಿಧಾನಸೌಧದಲ್ಲಿ ಕಂಡುಬಂತು. ಆಪರೇಶನ್ ಕಮಲ ಮೂಲಕ ಬಿಜೆಪಿ ಸೇರಿರುವ ಬೈರತಿ ಬಸವರಾಜ್, ಸುಧಾಕರ್, ಎಸ್.ಟಿ.ಸೋಮಶೇಖರ್, ಸುಧಾಕರ್, ಶಿವರಾಮ್ ಹೆಬ್ಬಾರ್ ಸಹಿತ ಪ್ರಮುಖ ಸಚಿವರು ರಾಜೀನಾಮೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು. ಒಂದು ಮೂಲದ ಪ್ರಕಾರ ಸಂಪುಟದಲ್ಲಿರುವವರ ಪೈಕಿ ಏಳು ಮಂದಿ ಬಾಂಬೆ ಫ್ರೆಂಡ್ಸ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ, ಸಂಪುಟ ಸಭೆಯ ನಂತರ ಸಿಎಂ ಹಾಗೂ ಸಚಿವ ಆರ್.ಅಶೋಕ್ ಅವರು ವಲಸಿಗ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎನ್ನಲಾಗುತ್ತಿದೆ.
ಸಚಿವರ ಸ್ಪಷ್ಟನೆ:
ನಾಯಕರ ಜೊತೆಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈ ಸಚಿವರು, ತಾವು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿಲ್ಲ ಎಂದರು. ಬಿಜೆಪಿಯ ತತ್ವ ಸಿಧಾಂತವನ್ನು ಮೆಚ್ಚಿ ಬಿಜೆಪಿ ಸೇರಿದ್ದೇವೆ. ಹಾಗಾಗಿ ಹೈಕಮಾಂಡ್ ಆದೇಸಕ್ಕೆ ತಕ್ಕಂತೆ ನಡೆದುಕೊಳ್ಳುವುದಾಗಿ ಈ ಸಚಿವರು ತಿಳಿಸಿದರು.